ಇ- ಖಾತೆ ವಿತರಣೆಗೆ ಲಂಚ ಕೇಳಿದ ಸಿಬ್ಬಂದಿ, ಚಪ್ಪಲಿ ಹಿಡಿದು ಬಂದ ವ್ಯಕ್ತಿ; ಸಕಲೇಶಪುರದ ಘಟನೆ Viral
ಹಾಸನ: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ಲಂಚಗುಳಿತನ ಮಿತಿಮೀರಿದೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇ-ಖಾತೆ ಪ್ರಕ್ರಿಯೆಗೆ ಲಂಚ ಕೇಳಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗಷ್ಟೇ ಖಡಕ್ ಎಚ್ಚರಿಕೆ ನೀಡಿದ್ದರೂ, ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಯಾದಂತೆ ಕಾಣುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಪುರಸಭಾ ಕಚೇರಿಯಲ್ಲಿ ನಡೆದಿದೆ.
ಇ-ಖಾತೆ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ವ್ಯಕ್ತಿಯೋರ್ವ ಕಚೇರಿಗೆ ನೇರವಾಗಿ ಚಪ್ಪಲಿ ಹಿಡಿದು ಬಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಕಲೇಶಪುರ ಪಟ್ಟಣದ ಅಗ್ರಹಾರ ಪ್ರದೇಶದಲ್ಲಿರುವ ಬಡವರ ಜಾಗಗಳಿಗೆ ಇ-ಖಾತೆ ಮಾಡಿಕೊಡುವಂತೆ ಕಳೆದ ಮೂರು ತಿಂಗಳಿಂದ ಸತತವಾಗಿ ಕಚೇರಿಗೆ ಅಲೆದಾಡಿ ಮನವಿ ಮಾಡಲಾಗುತ್ತಿತ್ತು. ಆದರೆ, ಪುರಸಭೆಯ ಅಧಿಕಾರಿಗಳು ಬಡವರ ಕೆಲಸವನ್ನು ಮಾಡಿಕೊಡದೆ ವಿನಾಕಾರಣ ಸತಾಯಿಸುತ್ತಿದ್ದರು. ಅಷ್ಟೇ ಅಲ್ಲದೆ, ಇ-ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರೀತಂ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.
ಲಂಚದ ಹಾವಳಿಯಿಂದ ಬೇಸತ್ತಿದ್ದ ಪ್ರೀತಂ, ಈ ಕುರಿತು ಮೇಲಾಧಿಕಾರಿಗಳಿಗೂ ದೂರು ನೀಡಿದ್ದರು. ಆದರೆ, ಮೇಲಾಧಿಕಾರಿಗಳಿಂದಲೂ ಯಾವುದೇ ಸ್ಪಂದನೆ ಸಿಗದ ಕಾರಣ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡ ಅವರು ಈ ಹೆಜ್ಜೆ ಇಟ್ಟಿದ್ದಾರೆ.
ಪುರಸಭೆ ಕಚೇರಿಗೆ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡೇ ಎಂಟ್ರಿ ಕೊಟ್ಟ ಪ್ರೀತಂ, ಅಲ್ಲಿನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪುರಸಭಾ ಅಧಿಕಾರಿ ನಟರಾಜ್ ಹಾಗೂ ಪ್ರೀತಂ ನಡುವೆ ಭಾರಿ ವಾಕ್ಸಮರವೇ ನಡೆದಿದೆ. ಲಂಚದ ಆರೋಪ ಮಾಡಿದ ವ್ಯಕ್ತಿಯನ್ನು ಅಧಿಕಾರಿ ಕೂಡ ಎದುರು ನಿಂತು ಪ್ರಶ್ನಿಸಿದ್ದಾರೆ. ಇಬ್ಬರ ನಡುವಿನ ಈ ಮಾತಿನ ಚಕಮಕಿ ಹಾಗೂ ಪ್ರೀತಂ ಅವರು ಕೈಯಲ್ಲಿ ಚಪ್ಪಲಿ ಹಿಡಿದು ಸನ್ನೆ ಮಾಡುತ್ತಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿರುವ ದೃಶ್ಯ ಕಚೇರಿಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಅಲ್ಲಿದ್ದ ಇತರರು ಈ ದೃಶ್ಯವನ್ನು ಮೊಬೈಲ್‌ನಲ್ಲೂ ಸೆರೆಹಿಡಿದಿದ್ದಾರೆ.
ಬಡವರಿಗೆ ಮೀಸಲಿಟ್ಟ ಜಾಗಕ್ಕೂ ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಂ ಅವರು ಕಚೇರಿಯಲ್ಲಿ ಗಲಾಟೆ ಮಾಡುತ್ತಿರುವ ಮೊಬೈಲ್ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.












Click it and Unblock the Notifications