HSRP: ಅಂತಿಮ ಗಡುವು ಕುರಿತು ಸರ್ಕಾರದ ಆದೇಶ ಪ್ರಕಟ
ಬೆಂಗಳೂರು, ಜುಲೈ 07: ಕರ್ನಾಟಕದ ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಹೊಸ ಗಡುವು ನೀಡಿದೆ. ಮಾಹಿತಿಯ ಪ್ರಕಾರ 5/7/2024ರ ತನಕ ಒಟ್ಟು 47,64,293 ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ.
ಸಾರಿಗೆ ಇಲಾಖೆ ಮೊದಲು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಮೇ 31ರ ಗಡುವು ನೀಡಿತ್ತು. ಬಳಿಕ ಕರ್ನಾಟಕ ಹೈಕೋರ್ಟ್‌ಗೆ ಜೂನ್ 12ರ ತನಕ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿತ್ತು.

ಕರ್ನಾಟಕ ಹೈಕೋರ್ಟ್ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮೇ 21ರಂದು ಹೊರಡಿಸಿದ್ದ ಆದೇಶವನ್ನು ಜುಲೈ 4ರ ತನಕ ವಿಸ್ತರಣೆ ಮಾಡಿತ್ತು. ಇದರಿಂದಾಗಿ ವಾಹನ ಸವಾರರು ನಿರಾಳರಾಗಿದ್ದರು.
ಗಡುವು ವಿಸ್ತರಣೆ ಮಾಡಿದ ಸರ್ಕಾರ: ಈಗ ಸರ್ಕಾರ ಏಪ್ರಿಲ್ 1, 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇದ್ದ ಗಡುವು ವಿಸ್ತರಣೆ ಮಾಡಿದೆ. 15/9/2024ರ ತನಕ ಹೆಚ್ಎಸ್ಆರ್‌ಪಿ ಅಳವಡಿಕೆ ಮಾಡಲು ಹೊಸ ಗಡುವು ನೀಡಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಸಭೆಯ ಬಳಿಕ ಕರ್ನಾಟಕ ಸರ್ಕಾರ 17/8/2023ರಂದು ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು ಎಂದು ಆದೇಶ ಹೊರಡಿಸಿತು.
ಬಳಿಕ ಎರಡು ಬಾರಿ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ದಿನಾಂಕವನ್ನು ಮುಂದೂಡಿಕೆ ಮಾಡಲಾಯಿತು. ಮೇ 31, 2024 ಅಂತಿಮ ಗಡುವು ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ ಲಕ್ಷಾಂತರ ವಾಹನಗಳು ಇನ್ನೂ ನಂಬರ್ ಪ್ಲೇಟ್ ಅಳವಡಿಕೆ ಮಾಡದ ಕಾರಣ ಮತ್ತೆ ಗಡುವು ವಿಸ್ತರಣೆ ಮಾಡಿದೆ.
ಸಾರಿಗೆ ಇಲಾಖೆಯೇ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 18/8/2023 ರಿಂದ 5/7/2024ರ ತನಕ ಒಟ್ಟು 47,64,293 ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಆದರೆ ಇನ್ನೂ ಲಕ್ಷಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಆನ್‌ಲೈನ್ ಮೂಲಕ ಮಾತ್ರ ನೋಂದಣಿ ಮಾಡಬೇಕಿದೆ. ಇದರಿಂದಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮಾಹಿತಿಯ ಕೊರತೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸರಿಯಾಗಿ ಪ್ರಚಾರವನ್ನು ನಡೆಸದ ಕಾರಣ ಜನರು ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ.
ನಂಬರ್ ಪ್ಲೇಟ್ ಪಡೆಯಲು ಕೆಲವು ತಾಂತ್ರಿಕ ಸಮಸ್ಯೆಗಳು ಸಹ ಇವೆ. ಹಳೆಯ ವಾಹನಗಳ ಕೆಲವು ಕಂಪನಿಗಳು ಮುಚ್ಚಿವೆ, ಡೀಲರ್‌ಗಳ ಕೊರತೆ ಇದೆ, ತಾಲೂಕು, ಗ್ರಾಮೀಣ ಮಟ್ಟದಲ್ಲಿ ಹೆಚ್ಎಸ್ಆರ್‌ಪಿ ಬಗ್ಗೆ ಮಾಹಿತಿಯ ಕೊರತೆ ಇದೆ. ಈ ಕಾರಣಕ್ಕೆ ಸಾರಿಗೆ ಇಲಾಖೆ ನಿರೀಕ್ಷೆ ಮಾಡಿದಷ್ಟು ವೇಗವಾಗಿ ಈ ಪ್ರಕ್ರಿಯೆ ನಡೆಯುತ್ತಿಲ್ಲ.
ಜನರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕುರಿತ ಗೊಂದಲದಲ್ಲಿ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದ್ದರಿಂದ ಸಾರಿಗೆ ಇಲಾಖೆ ಸಹಾಯವಾಣಿಯನ್ನು ಆರಂಭಿಸಿದೆ. 9449863429/ 26 ಸಂಖ್ಯೆಗೆ ಕರೆ ಮಾಡಿ ಜನರು ಅಗತ್ಯ ಮಾಹಿತಿಯನ್ನು ಪಡೆಯಬಹುದು.
ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ನೋಂದಣಿಗೆ https://transport.karnataka.gov.in ಅಥವ www.siam.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಈ ವೆಬ್‌ಸೈಟ್ ಮೂಲಕ ನೋಂದಣಿಯಾದವು ಮಾತ್ರ ಅಧಿಕೃತ ಎಂದು ಸಾರಿಗೆ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.
ಈಗಾಗಲೇ ಹಲವು ಬಾರಿ ಸರ್ಕಾರ ಗಡುವು ವಿಸ್ತರಣೆ ಮಾಡಿದೆ. ಆದ್ದರಿಂದ ಸೆಪ್ಟೆಂಬರ್ ನಂತರ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದಿದ್ದರೆ ಸರ್ಕಾರ ದಂಡ ಹಾಕುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅಂತಿಮ ದಿನಾಂಕದ ತನಕ ಕಾಯದೇ ವಾಹನ ಸವಾರರು ಹೆಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ.












Click it and Unblock the Notifications