ಮಾಜಿ ಸಿಎಂ ಯಡಿಯೂರಪ್ಪ ಪಿಎ ಉಮೇಶ್ ಮನೆ ಮೇಲೆ ಐಟಿ ದಾಳಿ ಯಾಕೆ? ಇಲ್ಲಿದೆ ಮಾಹಿತಿ!
ಬೆಂಗಳೂರು, ಅ. 07: ನವರಾತ್ರಿ ಮೊದಲ ದಿನ ಆದಾಯ ತೆರಿಗೆ ಇಲಾಖೆ ಹಣವಿದ್ದವರ ನೆಮ್ಮದಿಗೆಡಿಸಿದೆ. ರಾಜ್ಯದ ವಿವಿಧೆಡೆ ಬರೊಬ್ಬರಿ 50 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರಲ್ಲಿಯೂ ಮಾಜಿ ಮುಖ್ಯಮಂತ್ರಿ ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅವರ ಆಪ್ತರ ಮೇಲೆ ಆಗುತ್ತಿರುವ ಮೊದಲ ಐಟಿ ದಾಳಿ ಇದಾಗಿದೆ. ಜೊತೆಗೆ ಯಾರು ಈ ಉಮೇಶ್ ಎಂಬುದನ್ನು ನೋಡಿದರೆ ಅಚ್ಚರಿ ಮೂಡಿಸುವ ಸಂಗತಿಗಳು ಬಹಿರಂಗವಾಗುತ್ತಿವೆ.
ಐಟಿ ದಾಳಿಗೆ ಒಳಗಾಗಿರುವ ಉಮೇಶ್ ಮೂಲತಃ ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದರು. ಆದರೆ ಅವರು ಬಿಎಂಟಿಸಿಯಲ್ಲಿ ಕೆಲಸ ಮಾಡಿದ್ದೇ ಕಡಿಮೆ ಎಂಬ ಮಾಹಿತಿಯಿದೆ. ಗುರುವಾರ ಬೆಳಗ್ಗೆ ಉಮೇಶ್ ಅವರಿಗೆ ಸೇರಿದ ನಾಲ್ಕೈದು ಆಸ್ತಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಬಿಎಂಟಿಸಿ ಡ್ರೈವರ್ ಮನೆ ಮೇಲೆ ಐಟಿ ರೇಡ್!
ಬಿಎಂಟಿಸಿ ಚಾಲಕರಾಗಿದ್ದ ಉಮೇಶ್ ಮನೆ ಮೇಲೆ ಐಟಿ ದಾಳಿಯಾಗಿದೆ ಎಂದರೆ ನಂಬುವುದು ನಿಜಕ್ಕೂ ಕಷ್ಟ. ಆದರೆ ಆಗಿರುವುದು ಮಾತ್ರ ನಿಜ. ಹಾಗಂತ ಅವರು ಪೂರ್ಣ ಪ್ರಮಾಣದಲ್ಲಿ ಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸಿಲ್ಲ. ನೇಮಕವಾಗಿದ್ದು ಮಾತ್ರ ಬಿಎಂಟಿಸಿ ನಿರ್ವಾಹಕ ಕಂ ಚಾಲಕರಾಗಿ ಎಂಬ ಮಾಹಿತಿಯಿದೆ. ಅದು ಬೆಂಗಳೂರಿನ ಯಲಹಂಕದ ಪುಟ್ಟೇನಹಳ್ಳಿಯ ಬಿಎಂಟಿಸಿ ಡಿಪೋದಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದರು ಉಮೇಶ್.
ಆದರೆ ಉಮೇಶ್ ಬಿಎಂಟಿಸಿಯಲ್ಲಿ ಕೆಲಸ ಮಾಡಿದ್ದು ಕಡಿಮೆ ಎಂಬ ಮಾಹಿತಿಯಿದೆ. ಅವರು ಹೆಚ್ಚಾಗಿ ಕೆಲಸ ಮಾಡಿದ್ದು ಯಡಿಯೂರಪ್ಪ ಅವರೊಂದಿಗೆ ಎನ್ನಲಾಗುತ್ತಿದೆ. ಹೀಗಾಗಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತನ ಮೇಲೆ ಐಟಿ ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮೂಲತಃ ಶಿವಮೊಗ್ಗದ ಆಯನೂರಿನ ಉಮೇಶ್
ಬಿಎಂಟಿಸಿ ನೌಕರನಾಗಿದ್ದರೂ ಉಮೇಶ್ ವೃತ್ತಿ ಆರಂಭಿಸಿದ್ದು ಬಿಜೆಪಿ ನಾಯಕರ ಆಯನೂರು ಮಂಜುನಾಥ್ ಅವರಿಗೆ ಆಪ್ತ ಸಹಾಯಕನಾಗಿ. ನಂತರ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಾಗಲೂ ಅವರೊಂದಿಗೆ ಉಮೇಶ್ ಇದ್ದರು. ಅವರ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಈಗ ಹೊರಗೆ ಬರುತ್ತಿದೆ. ಯಡಿಯೂರಪ್ಪ ಅವರ ಪುತ್ರರಾದ ಸಂಸದ ರಾಘವೇಂದ್ರ ಹಾಗೂ ಬಿವೈ ವಿಜಯೇಂದ್ರ ಅವರಿಗೂ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯಿದೆ. ಹೀಗಾಗಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದಿಢೀರ್ ಏರಿಕೆಯಾದ ಉಮೇಶ್ ಆದಾಯ?
ಮೊದಲು ಆಯನೂರು ಮಂಜುನಾಥ್ ಅವರಿಗೆ ಪಿಎ ಆಗಿದ್ದ ಉಮೇಶ್, ಅವರು ರಾಜ್ಯಸಭಾ ಸದಸ್ಯರಾದ ಬಳಿಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಜೊತೆಯಾದ ಎನ್ನಾಗಿದೆ. ಆಗಿನಿಂದ ಯಡಿಯೂರಪ್ಪ ಕುಟುಂಬದ ಜತೆ ಉಮೇಶ್ ಆಪ್ತರಾಗಿದ್ದರು. ಜೊತೆಗೆ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ಉಮೇಶ್ ಮಾಡಿದ್ದಾರೆ ಎಂಬ ಆರೋಪವಿದೆ. ಜೊತೆಗೆ ಬೆಂಗಳೂರಿನ ವಿಜಯನಗರದಲ್ಲಿಯೂ 60*120 ವಿಸ್ತೀರ್ಣದಲ್ಲಿ ಒಂದು ಭವ್ಯ ಮನೆಯನ್ನು ಉಮೇಶ್ ನಿರ್ಮಾಣ ಮಾಡಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.
ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಉಮೇಶ್ ಆದಾಯದಲ್ಲಿ ದಿಢೀರ್ ಏರಿಕೆಯಾಗಿದ್ದು, ಅದೇ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಶೇಕಡಾ 300 ರಷ್ಟು ಆದಾಯ ಒಮ್ಮೆಲೆ ಹೆಚ್ಚಾಗಿದ್ದು, ಕಳೆದ ಆರು ತಿಂಗಳುಗಳಿಂದ ಮಾಹಿತಿ ಕಲೆ ಹಾಕಿ ಅಂತಿಮವಾಗಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
Recommended Video

ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್ ಹಿನ್ನೆಲೆ ಐಟಿ ರೇಡ್?
ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳನ್ನು ಉಮೇಶ್ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಇತ್ತೀಚೆಗೆ ಒಟ್ಟಾರೆ ಯಡಿಯೂರಪ್ಪ ಅವರ ಕುಟುಂಬದ ಎಲ್ಲರಿಗೂ ಉಮೇಶ್ ಅತ್ಯಾಪ್ತರಾಗಿದ್ದರು. ಹೀಗಾಗಿ ಸರ್ಕಾರದ ಕೆಲಸಗಳನ್ನು ಮಾಡಿಸುವಲ್ಲಿ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಿದ್ದರು.
ಹೀಗಾಗಿ ನೀರಾವರಿ ನಿಗಮದಲ್ಲಿ ನಡೆದಿದ್ದ ಟೆಂಡರ್ ಬಗ್ಗೆಯೂ ಬಿಜೆಪಿಯಲ್ಲಿ ಅಪಸ್ವರಗಳು ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಐಟಿ ದಾಳಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆಗಿರುವ ಹಿನ್ನಡೆ ಎಂಎ ಹೇಳಲಾಗುತ್ತಿದೆ. ಇದೇ ಮಾತನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೂ ಕಲಬುಗರಿಯಲ್ಲಿ ಹೇಳಿದ್ದಾರೆ.












Click it and Unblock the Notifications