ಕೊನೆಗೂ ಮಂಡ್ಯದಲ್ಲಿ ರಮ್ಯಾಗೆ ಮನೆ ಸಿಕ್ಕಿತು!
ಬೆಂಗಳೂರು, ಅ, 27 : ಮಂಡ್ಯದಲ್ಲಿ ಮನೆ ಮಾಡುತ್ತೇನೆ ಎಂದು ಘೋಷಿಸಿದ್ದ ಸಂಸದೆ ರಮ್ಯಾಗೆ ಮಂಡ್ಯದಲ್ಲಿ ಭವ್ಯ ಭಂಗಲೆ ದೊರಕಿದೆ. ಏಳು ವರ್ಷಗಳಿಮದ ವರ್ಷಗಳಿಂದ ಖಾಲಿ ಉಳಿದಿದ್ದ ಬಂಗಲೆಯನ್ನು ರಮ್ಯಾ ಇದೀಗ ತಮ್ಮ ಅಧಿಕೃತ ನಿವಾಸವನ್ನಾಗಿ ಮಾಡಿಕೊಳ್ಳಲಿದ್ದಾರೆ.
ಶುಕ್ರವಾರ ರಮ್ಯಾ ಮಂಡ್ಯ ನಗರದಲ್ಲಿರುವ ಮಾಜಿ ಶಾಸಕ ಸಾದತ್ ಆಲಿಖಾನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ಆ ಮನೆ ತುಂಬಾ ಇಷ್ಟವಾಗಿದೆ, ಮನೆಯ ಮುಂದಿನ ಗಿಡ-ಮರಗಳು, ರಮ್ಯಾ ಮನಸ್ಸಿಗೆ ಹಿಡಿಸಿದೆ. ಆಲಿಖಾನ್ ಅವರ ಜೊತೆ ಮಾತುಕತೆ ನಡೆಸಿದ ರಮ್ಯಾ, ಅದೇ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.

ಮನೆ ವಾಸ್ತುವಿನ ಬಗ್ಗೆ ವಾಸ್ತುಶಾಸ್ತ್ರಜ್ಞರ ಸಲಹೆಯನ್ನು ರಮ್ಯಾ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆಯೇ ಅಥವಾ ಕೊಂಡುಕೊಳ್ಳುತ್ತಾರೋ ಎಂದು ತಿಳಿದು ಬಂದಿಲ್ಲ. ಸದ್ಯ ಆರು ತಿಂಗಳ ಕಾಲ ರಮ್ಯಾ ಇಲ್ಲಿ ನೆಲೆಸಲಿದ್ದಾರೆ. ನಂತರ ಬಾಡಿಗೆ ಅಥವ ಕೊಂಡುಕೊಳ್ಳುವ ಕುರಿತು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೇಗಿದೆ ಮನೆ : ರಮ್ಯಾ ಅವರಿಗೆ ಸಿಕ್ಕಿರುವ ಮನೆ ಸಾಕಷ್ಟು ವಿಶಾಲವಾಗಿದೆ. ಬಂಗಲೆಯ ನೆಲ ಮಹಡಿಯಲ್ಲಿ 5 ಬೆಡ್‌ರೂಮ್, 1 ವಿಶಾಲವಾದ ಹಾಲ್, 1 ಅಡುಗೆ ಮನೆ ಇದೆ. ಮೊದಲ ಮಹಡಿಯಲ್ಲಿ 1 ಹಾಲ್ ಹಾಗೂ 2 ಬೆಡ್‌ರೂಮ್‌ಗಳಿವೆ.
ಈ ಮನೆ ಏಳು ವರ್ಷಗಳಿಂದ ಖಾಲಿ ಉಳಿದ್ದಿದ್ದರಿಂದ ಸದ್ಯ ಅಲ್ಲಿ ಕಾಮಗಾರಿ ಕೈಗೊಂಡು ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗಿದೆ. ಮನೆಯ ಕಾಮಗಾರಿಗಳು ಮುಗಿದ ಬಳಿಕ, ರಮ್ಯಾ ಒಳ್ಳೆಯ ದಿನ ನೋಡಿ ಗೃಹ ಪ್ರವೇಶ ನಡೆಸಲಿದ್ದಾರೆಂದು ತಿಳಿದುಬಂದಿದೆ. ಈ ಮೂಲಕ ಹಲವು ದಿನಗಳ ಹುಡುಕಾಟದ ಬಳಿಕ ರಮ್ಯಾ ಅವರಿಗೆ ಒಂದು ಮನೆ ದೊರಕಿದೆ.
ಲೋಕಸಭೆ ಉಪ ಚುನಾವಣೆಯ ಪ್ರಚಾರ ನಡೆಸುವಾಗಲೇ ರಮ್ಯಾ ಮಂಡ್ಯದಲ್ಲಿ ನೆಲೆಸುವುದಾಗಿ ಘೋಷಿಸಿದ್ದರು. ಆಗಿನಿಂದಲೇ ಮಂಡ್ಯದಲ್ಲಿ ಮನೆಗಾಗಿ ಹುಡುಕಾಟ ನಡೆಸಿದ್ದರು. ಆದರೂ, ಅವರಿಗೆ ಸೂಕ್ತವಾದ ಮನೆ ದೊರಕಿರಲಿಲ್ಲ. ಸದ್ಯ ಮನೆ ಸಿಕ್ಕಿದ್ದು, ರಮ್ಯಾ ಮಂಡ್ಯದಲ್ಲಿಯೇ ನೆಲೆಸಲಿದ್ದಾರೆ.












Click it and Unblock the Notifications