ಪವಿತ್ರ ರಂಜಾನ್ ಉಪವಾಸ ವ್ರತ ಆರಂಭ
ಬೆಂಗಳೂರು, ಜೂ.29: ಕೇರಳದ ವಿವಿಧ ಕಡೆಗಳಲ್ಲಿ ಶನಿವಾರ ಸಂಜೆ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಜೂ.29ರಿಂದ ರಂಜಾನ್ ಉಪವಾಸ ವ್ರತ ಆರಂಭವಾಗಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಸೋಮವಾರದಿಂದ ರಂಜಾನ್ ಉಪವಾಸ ವ್ರತ ಕೈಗೊಳ್ಳಬಹುದಾಗಿದೆ ಎಂದು ಚಂದ್ರದರ್ಶನ ಸಮಿತಿ ಸಂಚಾಲಕ ಮೌಲಾನಾ ಖದೀರ್ ಅಹ್ಮದ್ ತಿಳಿಸಿದ್ದಾರೆ.
ರಂಜಾನ್ ಆರಂಭದ ಕುರಿತಂತೆ ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲಾ ಖಾಝಿ ಅಲ್ಹಾಜ್ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕೇರಳದ ಪರಪ್ಪನಂಗಡಿ ಎಂಬಲ್ಲಿ ಚಂದ್ರದರ್ಶನವಾಗಿದೆ ಎಂದು ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ (ಕೂರ ತಂಙಳ್) ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಭಾನುವಾರ ಚಂದ್ರದರ್ಶನ ಆಗಲಿದ್ದು, ಸೋಮವಾರದಿಂದ ವ್ರತ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಇಸ್ಲಾಮಿನ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ರಮದಾನ್(ರಂಜಾನ್) ಒಂಭತ್ತನೇ ತಿಂಗಳು. ಹಾಗೂ ಬಹು ಪವಿತ್ರವಾದ ಮಾಸ ಕೂಡಾ. ಇಮಾಮರ ಕಣ್ಣಿಗೆ ಚಂದ್ರ ದರ್ಶನವಾದ ನಂತರ ಮಾಸಾಚಾರಣೆಗೆ ಸಿದ್ಧತೆ ಆರಂಭವಾಗುತ್ತದೆ.

ಮಸೀದಿಯಲ್ಲಿ ಮುಂಜಾನೆ ಸೆಹ್ರಿ ಸೇವಿಸಿ ನಂತರ ಒಂದು ತಿಂಗಳ ಕಾಲ ರೋಜಾ ಇರುವ ಸಂಕಲ್ಪ ಕೈಗೊಳ್ಳಲಾಗುತ್ತದೆ. ಮುಂಜಾನೆಯಿಂದ ಮುಸ್ಸಂಜೆವರೆಗೂ ರೋಜಾ ಜಾರಿಯಲ್ಲಿರುತ್ತದೆ. ರೋಜಾ ಜಾರಿಯಲ್ಲಿರುವ ಸಂದರ್ಭದಲ್ಲಿ ಮದ್ಯ, ಮಾಂಸ, ಮಾನಿನಿಯರ ಸಂಗ ನಿಷಿದ್ಧ. ಪವಿತ್ರ ಖುರಾನ್ ಪಠಣ ಎಲ್ಲೆಡೆ ಸಾಂಗವಾಗಿ ನಡೆಯುತ್ತದೆ.
ಈದ್ ಉಲ್ ಫಿತರ್ ದಿನದಂದು ಉಪವಾಸ ಸಂಕಲ್ಪ ಪೂರ್ಣಗೊಳ್ಳುತ್ತದೆ. ಅಂದು ಸಂಭ್ರಮದಿಂದ ಸಿಹಿ ತಿನಿಸು, ಹಬ್ಬದೂಟ ಮಾಡಿ ಬಡಬಗ್ಗರಿಗೆ ಹಂಚಲಾಗುತ್ತದೆ. ಹೊಚ್ಚ ಹೊಸ ಉಡುಪುಗಳನ್ನು ಧರಿಸಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ತೊಡಗುತ್ತಾರೆ.[ಇಸ್ಲಾಂ ಎಂದರೇನು? ರಂಜಾನ್ ವೈಶಿಷ್ಟ್ಯ ಏನು?]
ವಿಶ್ವದೆಲ್ಲೆಡೆ ರೋಜಾ ಜಾರಿ: 30 ದಿನಗಳ ಕಾಲ ಉಪವಾಸ(ರೋಜಾ) ನಡೆಯಲಿದ್ದು, ಮಧ್ಯಪ್ರಾಚ್ಯ ದೇಶಗಳು, ಈಜಿಪ್ಟ್, ಇಂಡೋನೇಷ್ಯಾದಲ್ಲಿ ಉಪವಾಸ ಆರಂಭವಾಗಿದೆ. ಅಲ್ಲದೆ, ಅಫ್ಘಾನಿಸ್ತಾನ, ಸಿರಿಯಾ, ಯೆಮೆನ್, ಪ್ಯಾಲೆಸ್ತೇನ್, ಮಲೇಷಿಯಾ ಹಾಗೂ ಸಿಂಗಾಪುರ್‌ಗಳಲ್ಲಿನ ಸುನ್ನಿಗಳು ರಂಜಾನ್ ಆರಂಭಿಸಿದ್ದಾರೆ. ಪಾಕಿಸ್ತಾನ, ಇರಾನ್ ಸೇರಿದಂತೆ ವಿಶ್ವದ ಶಿಯಾ ಪಂಗಡದವರು ಉಪವಾಸ ಕೈಗೊಂಡಿದ್ದಾರೆ.
ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರವಾಗಿದ್ದು, ಮುಸ್ಲಿಮರು ರಂಜಾನ್ ಉಪವಾಸ ಕೈಗೊಳ್ಳುವ ಮೂಲಕ ಅಲ್ಲಾಹ್ ನ ಕೃಪೆಗೆ ಪಾತ್ರರಾಗಬೇಕು. ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ(ISIS ಗಳನ್ನು ಉದ್ದೇಶಿಸಿ) ಹಾದಿ ಹಿಡಿದಿರುವುದು ಖಂಡನೀಯ ಎಂದು ಸೌದಿ ರಾಜ ಅಬ್ದು ಮನವಿ ಮಾಡಿಕೊಂಡಿದ್ದಾರೆ.
ಅತ್ತ ಬ್ರೆಜಿಲ್ ನಲ್ಲಿ ಫೀಫಾ ವಿಶ್ವಕಪ್ ನಲ್ಲಿ ಪಾಲ್ಗೊಂಡಿರುವ ದೇಶಗಳಲ್ಲಿನ ಆಟಗಾರರು ರಂಜಾನ್ ಮಾಸಾಚರಣೆ ಚಿಂತೆಯಲ್ಲಿದ್ದಾರೆ. ಅಲ್ಜೀರಿಯಾದ ಆಟಗಾರರು ಇಮಾಮ್ ಅವರನ್ನು ಭೇಟಿ ಮಾಡಿ ಬಂದಿದ್ದು ಜರ್ಮನಿ ವಿರುದ್ಧದ ಪಂದ್ಯ ಮುಗಿಯುವವರೆಗೂ ರೋಜಾದಿಂದ ವಿನಾಯತಿ ನೀಡಲಾಗಿದೆ.












Click it and Unblock the Notifications