Heavy Rain: ಬಿರು ಬಿಸಿಲಿನ ಅಬ್ಬರ: ಈ ಜಿಲ್ಲೆಗಳಲ್ಲಿ ಒಂದು ಗಂಟೆಗಳ ಕಾಲ ಭರ್ಜರಿ ಮಳೆ
ಬೆಳಗಾವಿ, ಮಾರ್ಚ್ 17: ಕರ್ನಾಟಕದಲ್ಲಿ ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ನಡುವೆ, ಪೂರ್ವ ಮುಂಗಾರು ಮಳೆಯ ಅಬ್ಬರ ಶುರುವಾಗಿದೆ. ಮಾರ್ಚ್ ಆರಂಭದಿಂದಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣನ ಅಬ್ಬರ ಆರಂಭವಾಗಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದರೆ, ಮತ್ತೊಂದೆಡೆ ಮಳೆಯ ಅಬ್ಬರವೂ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬಿರು ಬಿಸಿಲಿನ ತಾಪದಿಂದ ಕಂಗೆಟ್ಟ ಹೋಗಿದ್ದಾರೆ. ಬಿಸಿಲಿನಿಂದ ರೋಸಿ ಹೋಗಿದ್ದ ಜನರಿಗೆ ವರ್ಷದ ಮೊದಲ ಧಾರೆ ತಂಪನ್ನೆರಿದಿದ್ದು, ಕೊಂಕಣದ ಜನ ಫುಲ್ ಖುಷಿಯಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಗಡಿಂಗಲಜ ತಾಲೂಕಿನ ಅಜರಾ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರು ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಭಾರೀ ಮಳೆಯಿಂದ ಹೊಲ ಗದ್ದೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ.

ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ತಾಪಮಾನದಲ್ಲಿ ಭಾರೀ ಏರಿಕೆ ಕಂಡಿತ್ತು. ಕಳೆದೆರಡು ದಿನಗಳಿಂದ ಅಲ್ಲಲ್ಲಿ ಮೋಡದ ವಾತಾವರಣ ಕಂಡು ಬಂದಿತ್ತು. ಇದೀಗ ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡಿರುವ ಅಜರಾ ಪಟ್ಟಣದಲ್ಲಿ ಸುರಿದ ಮಳೆಯಿಂದಾಗಿ ಬೆಳಗಾವಿ ಭಾಗದ ಜನರು ಫುಲ್ ಖುಷಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ, ಮಹಾರಾಷ್ಟ್ರದ ಕರಾವಳಿ ಭಾಗಗಳಲ್ಲಿ ಮಧ್ಯಮದಿಂದ ಭಾರೀ ಉಷ್ಣಾಂಶ ಹೆಚ್ಚಾಗಿತ್ತು. ಇ ಒಳನಾಡಿನ ಭಾಗಗಳಲ್ಲಿಯೂ ಕೆಲವು ಮಳೆ ಚಟುವಟಿಕೆಗಳು ಪ್ರಾರಂಭವಾಗಿದ್ದು, ನಿನ್ನೆ ಬೆಳಂಬೆಳಗ್ಗೆ ಮಳೆರಾಯ ಲಗ್ಗೆ ಇಟ್ಟಿದ್ದು ಉತ್ತರ ಮಲೆನಾಡು, (ಕೊಂಕಣ)ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ಮಹಾರಾಷ್ಟ್ರ ಘಟ್ಟ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಬಿರು ಬಿಸಿಲಿನಬೇಗೆಯಿಂದ ಕಂಗೆಟ್ಟ ಜನರಿಗೆ ವರ್ಷದ ಮೊದಲ ಅಕಾಲಿಕ ಮಳೆ ಬೆಳಗಾವಿ ಜನರ ಮೊಗದಲ್ಲೂ ಮಂದಹಾಸ ಮೂಡಿಸಿದೆ. ಇನ್ನೂ ರಾಜ್ಯದ ಹಲವು ಕಡೆಗಳಲ್ಲಿ ಬೇಸಿಗೆಯಲ್ಲೇ ಮಳೆ ಆರಂಭವಾಗಿದೆ. ಹಲವು ಜಿಲ್ಲೆಗಳು ಈಗಾಗಲೇ ವರ್ಷದ ಮೊದಲ ಮಳೆಯ ದರ್ಶನ ಮಾಡಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ತಮಿಳುನಾಡು, ಕೇರಳದ ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಇನ್ನೂ ರಾಜ್ಯದ ಮೈಸೂರು, ಚಾಮರಾಜನಗರ ಮತ್ತು ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ.
ಮೈಸೂರು ಜಿಲ್ಲೆ ಮತ್ತು ಕೇರಳದ ವಯನಾಡು ಭಾಗಕ್ಕೆ ಹೊಂದಿಕೊಂಡಿರುವಂತೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಗಾಳಿಯೊಂದಿಗೆ ಮಳೆಯಾಗಿದೆ. ಭಾನುವಾರ ಸಂಜೆ ಮೈಸೂರು ಜಿಲ್ಲೆಯ ಸಾಗರದಲ್ಲಿ 49.50 ಮಿಮೀ ಮಳೆಯಾಗಿದ್ದು, ದಕ್ಷಿಣ ಕೊಡಗಿನಲ್ಲಿ ಭಾರಿ ಮಳೆಯಾಗಿದೆ. ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿಯನ್ನು ಆಧರಿಸಿ ಕೆಎಸ್‌ಎಂಡಿಸಿ ಮುನ್ಸೂಚನೆ ನೀಡಿದೆ.












Click it and Unblock the Notifications