ಕಾಂಗ್ರೆಸ್‌ನಲ್ಲಿ ಯೋಗೇಶ್ವರ್ ಬೆಳೆಯಲು ಆ ನಾಯಕ ಬಿಡಲ್ಲ: ಆಶೋಕ್ ಹೇಳಿದ್ದು ಯಾರ ಬಗ್ಗೆ?
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕೆಂಡಕಾರಿದ್ದಾರೆ. ಜೊತೆಗೆ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಅನಿವಾರ್ಯವೂ ಅಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್‌ನಲ್ಲಿ ಯೋಗೇಶ್ವರ್ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.
ಕಾಂಗ್ರೆಸ್ ಈಗಾಗಲೇ ಹಲವು ನಾಯಕರು ಹೋಗಿ ಬಂದಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿಕೊಂಡಿದ್ದರು. ಅಲ್ಲಿ ಅವರಿಗೆ ಯಾವ ಸ್ಥಾನವೂ ಸಿಗಲಿಲ್ಲ. ಬಳಿಕ ಬಿಜೆಪಿಗೆ ವಾಪಸ್ ಆದರು. ಇನ್ನು ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್‌ಗೆ ಹೋದರು. ಅಲ್ಲಿ ಅವರಿಗೆ ಯಾವ ಸ್ಥಾನ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.

ಸಿ.ಪಿ.ಯೋಗೇಶ್ವರ್ ಕಥೆ ಕೂಡ ಹಾಗೆಯೇ ಆಗುತ್ತದೆ. ಈಗ ಅವರು ಕೂಡ ಕಾಂಗ್ರೆಸ್‌ನಲ್ಲಿ ಲಾಸ್ಟ್ ಬೆಂಚ್‌ನಲ್ಲಿ ಕೂರುತ್ತಾರೆ. ಯಾಕೆಂದ್ರೆ ಕಾಂಗ್ರೆಸ್‌ನಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಬೆಳೆಯಲು ಡಿ.ಕೆ.ಶಿವಕುಮಾರ್ ಅವರು ಬಿಡಲ್ಲ. ಒಟ್ಟಾರೆ ಯೋಗೇಶ್ವರ್ ಕಾಂಗ್ರೆಸ್ ಸೇರಿ ತಮ್ಮ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೊದಲಿನಿಂದಲೂ ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಎಂದು ನಿಶ್ಚಯವಾಗಿತ್ತು. ಇದನ್ನು ಎಚ್‌ಡಿಕೆ ತೀರ್ಮಾನ ಮಾಡುತ್ತಾರೆ ಎಂದೇ ಹೇಳಲಾಗಿತ್ತು. ಹೀಗಿರುವಾಗ ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ನಿಲ್ಲುವಂತೆ ಯೋಗೇಶ್ವರ್ ಅವರಿಗೆ ಆಫರ್ ಕೂಡ ನೀಡಿದರು. ಚಿಹ್ನೆ ಯಾವುದಾದರೇನು? ಒಟ್ಟಾರೆ ಎನ್‌ಡಿಎ ಕಡೆಯಿಂದಲೇ ಅವರು ಅಭ್ಯರ್ಥಿಯಾಗುತ್ತಿದ್ದರು. ಹಿರಿಯ ನಾಯಕರೂ ಆಗಿದ್ದ ಅವರಿಗೆ ಟಿಕೆಟ್ ಕೊಡುತ್ತಿದ್ದೆವು. ಅಷ್ಟರಲ್ಲಿ ಹೀಗೆ ಮಾಡಿಕೊಂಡಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ಅಲ್ಲದೆ ಯೋಗೇಶ್ವರ್ ಅವರು ಬಿಜೆಪಿಯ ಕಟ್ಟಾಳು ಏನಲ್ಲ. ಅವರು ಬಿಜೆಪಿಯ ಸಿದ್ಧಾಂತದಿಂದಲೂ ಬಂದವರಲ್ಲ. ಸೈಕಲ್ ಪಾರ್ಟಿ, ಪಕ್ಷೇತರ ಸೇರಿ ಬೇರೆ ಪಕ್ಷದಿಂದ ಬಂದವರು. ಏನಾದರೂ ಅವರನ್ನು ನಾವು ಉಳಿಸಿಕೊಳ್ಳಬೇಕೆಂದು ಹೈಕಮಾಂಡ್ ಜೊತೆಗೂ ಮಾತನಾಡಿದ್ದೆವು. ನಮ್ಮ ಮಾತನ್ನು ಕೇಳಿಸಿಕೊಳ್ಳದೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದಿದ್ದಾರೆ.
ಯೋಗೇಶ್ವರ್ ಅವರು ಕಾಂಗ್ರೆಸ್ ಬದಲಿಗೆ ಜೆಡಿಎಸ್‌ನಿಂದಲೇ ಚುನಾವಣೆಗೆ ನಿಲ್ಲಬಹುದಿತ್ತು. ಇದರಿಂದ ನಮ್ಮ ಎನ್‌ಡಿಎಗೆ ಬಹಳ ಅನುಕೂಲ ಆಗುತ್ತಿತ್ತು. ಆದರೆ ಯೋಗೇಶ್ವರ್ ಅವರು ಬಿಜೆಪಿಗೆ ಪಕ್ಷ ದ್ರೋಹ ಮಾಡಿದ್ದಾರೆ. ಯೋಗೇಶ್ವರ್ ಅವರು ಮೊದಲೇ ಕಾಂಗ್ರೆಸ್ ಸೇರುತ್ತಾರೆ ಎಂದ ಸುಳಿವು ನಮಗೂ ಇತ್ತು. ಈ ಬಗ್ಗೆ ಪ್ರಹ್ಲಾದ್ ಜೋಶಿ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಕೂಡ ಹೇಳಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಈ ವಿಚಾರ ಗೊತ್ತಿದ್ದರೂ ಯೋಗೇಶ್ವರ್ ಅವರನ್ನು ನಾವು ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆವು. ಆದರೂ ಮಾತು ಕೇಳದೆ ಇಟ್ಟಿರುವ ಹೆಜ್ಜೆಯಿಂದಾಗಿ ಯೋಗೇಶ್ವರ್ ಕಾಂಗ್ರೆಸ್‌ನಲ್ಲಿ ನಾಯಕನಾಗಿ ಬೆಳೆಯಲು ಸಾಧ್ಯವೇ ಇಲ್ಲ. ಸಿಪಿವೈ ಅವರು ತಮ್ಮ ಕಾಲಿನ ಮೇಲೆ ಅವರೇ ಕಲ್ಲು ಹಾಕಿಕೊಂಡಿದ್ದಾರೆ ಬೇಸರ ವ್ಯಕ್ತಪಡಿಸಿದ್ದಾರೆ.
ಈಗ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದರಿಂದ ನಮಗೆ ಯಾವುದೇ ನಷ್ಟವಿಲ್ಲ. ಚನ್ನಪಟ್ಟಣದಲ್ಲಿ ಗೆಲ್ಲೋದು ನಾವೇ. ಸಿಪಿವೈ ಇಲ್ಲದಾಗಲೂ ನಾವು ಗೆಲುವು ಸಾಧಿಸಿದ್ದೇವೆ. ಅವರೇನು ಮೂಲ ಬಿಜೆಪಿಗರಲ್ಲ. ತಮ್ಮ ಮಾತೃಪಕ್ಷಕ್ಕೆ ಹೋಗಿದ್ದಾರಷ್ಟೇ. ಕುಮಾರಸ್ವಾಮಿ ಅವರೂ ಇದೇ ಕಾರಣದಿಂದ ಅಭ್ಯರ್ಥಿ ಘೋಷಣೆ ಮಾಡಲಿಲ್ಲ ಎಂದಿದ್ದಾರೆ.
ಯೋಗೇಶ್ವರ್ ಅವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಮೊದಲೇ ಹೇಳಿದ್ದರು. ಒಂದು ವೇಳೆ ನಾವು ಯೋಗೇಶ್ವರ್‌ಗೆ ಟಿಕೆಟ್ ಕೊಟ್ಟಿದ್ರೆ ನಮಗೇ ಕಷ್ಟವಾಗುತ್ತೆ ಎಂದು ಎಚ್‌ಡಿಕೆ ಹೇಳಿದ್ದರು. ಈ ಕಾರಣದಿಂದಲೇ ಅವರು ಇಲ್ಲಿವರೆಗೆ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ ಅನಿಸುತ್ತೆ ಎಂದು ಆರ್.ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications