ಮುಸ್ಲಿಂ ಡಿಸಿ ಹೆಸರು ಮತ್ತು ಪುತ್ತೂರು ದೇವಾಲಯದ ವಿವಾದ

Posted By:
Subscribe to Oneindia Kannada

ಮಂಗಳೂರು, ಮಾ 18 : ಪುರಾಣ ಪ್ರಸಿದ್ದ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ 'ಆಮಂತ್ರಣ ಪತ್ರಿಕೆ' ವಿವಾದ ತಾರಕಕ್ಕೇರಿದ್ದು, ಎರಡು ಕೋಮುಗಳ ನಡುವಿನ ಮನಸ್ತಾಪ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮಹಾಲಿಂಗೇಶ್ವರನ ಭಕ್ತರಿಗೆ ಈ ವಿವಾದ ಬೇಕೋ, ಬೇಡವೋ.. ಆದರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಒಳಜಗಳ, ಸ್ವಪ್ರತಿಷ್ಠೆ ಮತ್ತು ಸಂಘಪರಿವಾರದ ಪ್ರತಿಭಟನೆಯಿಂದಾಗಿ ಈ ಸಮಸ್ಯೆ ಜಟಿಲವಾಗುತ್ತಾ ಸಾಗುತ್ತಿದೆ.(ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ)

ದೇವಾಲಯದ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಹೆಸರು ಅಚ್ಚಾಗಿರುವುದು ಈ ಸಮಸ್ಯೆಗೆ ಮೂಲ ಕಾರಣ. ಸಮಸ್ಯೆ ಸರಿ ಮಾಡುತ್ತೇನೆಂದು ಹೇಳಿದ್ದ ಸ್ಥಳೀಯ ಶಾಸಕಿ ಶಕುಂತಲಾ ಶೆಟ್ಟಿ ಭಕ್ತಾದಿಗಳ ಸಭೆಗೆ ಗೈರಾಗಿದ್ದರಿಂದ ಸಮಸ್ಯೆ ಈಗ ಉಲ್ಬಣಗೊಳ್ಳುತ್ತಾ ಸಾಗುತ್ತಿದೆ.

ಮುಜರಾಯಿ ಕಾನೂನಿನಲ್ಲಿ ಹಿಂದೂಯೇತರ ವ್ಯಕ್ತಿಗಳ ಹೆಸರು ಹಾಕಲು ಅವಕಾಶವಿಲ್ಲದಿದ್ದರೂ, ಹಿಂದೂ ಕೋಮಿನವರ ಭಾವನೆಯನ್ನು ಧಕ್ಕೆ ತರುವುದು ಜಿಲ್ಲಾಡಳಿತದ ಉದ್ದೇಶ ಎಂದು ಹಿಂದೂಪರ ಸಂಘಟನೆಗಳು ಪ್ರತಿಭಟನೆಯ ಹಾದಿ ತುಳಿದಿದ್ದು, ಪುತ್ತೂರು ಬಂದ್ ಕರೆಯುವ ಸಾಧ್ಯತೆಯಿದೆ.

ಮಹಾಲಿಂಗೇಶ್ವರ ನಾನು ನಂಬಿದ ದೇವರು, ಆಮಂತ್ರಣ ಪತ್ರಿಕೆಯನ್ನು ನನ್ನ ಸ್ವಂತ ದುಡ್ಡಿನಿಂದ ಮರುಮುದ್ರಣಗೊಳಿಸುವುದಾಗಿ ಸ್ಥಳೀಯ ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದರು.

ಆಮಂತ್ರಣ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಭಕ್ತಾದಿಗಳನ್ನು ಸಭೆಗೆ ಆಹ್ವಾನಿಸಿದ್ದ ಶಕುಂತಳಾ ಶೆಟ್ಟಿ ಹಾಗೂ ದೇವಳದ ಆಡಳಿತ ಸಮಿತಿಯವರೇ ಸಭೆಗೆ ಗೈರು ಹಾಜರಾಗಿದ್ದರು. ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಜಾತ್ರೆಯ ಬಗ್ಗೆ ಅಧಿಕಾರಿಗಳ ಸಭೆ ನಡೆಯಿತು.(ಕಂಬಳಕ್ಕೆ ದೈವೀ ಸ್ಥಾನ ನೀಡಿದ ಕಟೀಲ್)

ನನಗೂ ಮಹಾಲಿಂಗೇಶ್ವರನ ಮೇಲೆ ನಂಬಿಕೆಯಿದೆ ಎಂದು ಇಬ್ರಾಹಿಂ ಹೇಳಿದ್ದಾರೆ. ವಿವರಗಳು ಸ್ಲೈಡಿನಲ್ಲಿ..

ಮುಜರಾಯಿ ಇಲಾಖೆಯ ಕಾನೂನು

ಮುಜರಾಯಿ ಇಲಾಖೆಯ ಕಾನೂನು

ಹಿಂದೂ ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆಯ ಕಾನೂನಿನಂತೆ ಹಿಂದೂಯೇತರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸುವಂತಿಲ್ಲ. ಜಿಲ್ಲಾಧಿಕಾರಿ ಇಬ್ರಾಹಿಂ ಅವರ ಹೆಸರಿನಲ್ಲಿ ಮುದ್ರಿಸಿದ ಆಮಂತ್ರಣ ಪತ್ರಿಕೆಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎನ್ನುವುದು ಹಿಂದೂಪರ ಸಂಘಟನೆಯ ಮುಖಂಡರ ಆಕ್ರೋಶ.

ಭಜರಂಗದಳ

ಭಜರಂಗದಳ

ಗುರುವಾರ (ಮಾ 17) ಪುತ್ತೂರು ಮಿನಿ ವಿಧಾನಸೌಧದ ಮುಂದೆ ನಡೆದ ಪ್ರತಿಭಟನೆಯಲ್ಲಿ, ಜಾತ್ರೋತ್ಸವಕ್ಕೆ ಬಂದು ದೇವರ ಗಂಧ ಪ್ರಸಾದ ಸ್ವೀಕರಿಸುವಂತೆ ಇಬ್ರಾಹಿಂ ಅವರು ಭಕ್ತಾದಿಗಳನ್ನು ಆಮಂತ್ರಿಸುವುದು ಎಷ್ಟು ಸರಿ? ಇದು ಜಿಲ್ಲಾಧಿಕಾರಿ ಅಥವಾ ಜಿಲ್ಲಾಡಳಿತದ ವಿರುದ್ಧ ನಮ್ಮ ಹೋರಾಟವಲ್ಲ. ಆಮಂತ್ರಣದಲ್ಲಿ ಹಿಂದೂಯೇತರರ ಹೆಸರು ಮುದ್ರಿಸಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪ ಎಂದು ಭಜರಂಗದಳದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಇಬ್ರಾಹಿಂ ಸ್ಪಷ್ಟನೆ

ಇಬ್ರಾಹಿಂ ಸ್ಪಷ್ಟನೆ

ದೇವಸ್ಥಾನದ ಆಹ್ವಾನ ಪತ್ರಿಕೆಯಲ್ಲಿ ಲೋಪದೋಷವಾಗಿಲ್ಲ, ಈ ವಿವಾದದ ಕುರಿತು ನನಗೆ ತೀವ್ರ ಬೇಸರವಾಗಿದೆ. ಆದರೂ, ಜಿಲ್ಲಾಧಿಕಾರಿಯಾಗಿ ಎಲ್ಲರನ್ನೂ ಒಗ್ಗೂಡಿಸುವ ಜವಾಬ್ದಾರಿ ನನ್ನ ಮೇಲಿದೆ. ನನಗೆ ಕೂಡಾ ಮಹಾಲಿಂಗೇಶ್ವರನ ಮೇಲೆ ನಂಬಿಕೆಯಿದೆ. ನಾನೊಬ್ಬ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ, ನಾನು ಆ ಜಾತಿ, ಈ ಕೋಮಿನವನೆಂದು ಎಂದೂ ಕೆಲಸ ಮಾಡಿದವನಲ್ಲ. ಈಗ ನಡೆಯುತ್ತಿರುವ ಪ್ರತಿಭಟನೆ, ವಿವಾದ ವೈಯಕ್ತಿಕವಾಗಿ ನನಗೆ ನೋವು ತಂದಿದೆ - ಜಿಲ್ಲಾಧಿಕಾರಿ ಇಬ್ರಾಹಿಂ.

ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ

ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ

ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಧಾರ್ಮಿಕ ಪೂಜಾ ವಿಧಿ-ವಿಧಾನಗಳಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ ಎನ್ನುವ ಉಲ್ಲೇಖವಿದ್ದರೂ, ಕಾರ್ಯಕ್ರಮದಲ್ಲಿ ಭಾಗವಹಿಸಲು, ಆಮಂತ್ರಣ ನೀಡುವ ವಿಚಾರದಲ್ಲಿ ಗೊಂದಲವಿಲ್ಲ. ಜಿಲ್ಲಾಧಿಕಾರಿಗೆ ಜಿಲ್ಲೆಯ ಅಧೀನ ಸಂಸ್ಥೆಗಳಲ್ಲಿನ ಜವಾಬ್ದಾರಿ ಇರುವುದು ಸರ್ವೆಸಾಮಾನ್ಯ. ಇಲ್ಲಿ ಜಾತಿ,ಬಣ್ಣ ಲೆಕ್ಕಕ್ಕೆ ಬರುವುದಿಲ್ಲ ಎಂದು ಇಬ್ರಾಹಿಂ ಸ್ಪಷ್ಟ ಪಡಿಸಿದ್ದಾರೆ.

ಮೈಸೂರು ಮತ್ತು ಕುಕ್ಕೆ ದೇವಾಲಯ

ಮೈಸೂರು ಮತ್ತು ಕುಕ್ಕೆ ದೇವಾಲಯ

ಮೈಸೂರು ಚಾಮುಂಡೇಶ್ವರಿ ಉತ್ಸವ , ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಜಾತ್ರೋತ್ಸವದಲ್ಲಿಯೂ ತನ್ನ ಹೆಸರು ಮುದ್ರಿಸಲಾಗಿತ್ತು. ಆದರೆ ಎಲ್ಲಿಯೂ ಲೋಪ ಆಗಿಲ್ಲ. ಧಾರ್ಮಿಕ ವಿಧಿವಿಧಾನಗಳಿಗೂ ಲೋಪವಾಗಿಲ್ಲ ,ಜಿಲ್ಲಾಧಿಕಾರಿಗೆ ಸಮಾಜದಲ್ಲಿ ಗೌರವವಿದ್ದು, ಕ್ಷುಲ್ಲಕ ವಿಚಾರಗಳನ್ನು ಎಳೆದು ತರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಇಬ್ರಾಹಿಂ ಪುತ್ತೂರಿನಲ್ಲಿ ಹೇಳಿದ್ದಾರೆ.

ಜನಾರ್ಧನ ಪೂಜಾರಿ

ಜನಾರ್ಧನ ಪೂಜಾರಿ

ಹಿಂದೂಯೇತರರು ದೇವಸ್ಥಾನಕ್ಕೆ ಬಂದರೆ ಅದು ಗೌರವ ಎಂದು ಭಾವಿಸಬೇಕು. ಕುದ್ರೋಳಿ ದೇವಾಲಯಕ್ಕೆ ಎಲ್ಲರೂ ಬರುತ್ತಿಲ್ಲವೇ, ಅದು ಕೂಡಾ ಹಿಂದೂ ದೇವಾಲಯ ತಾನೇ. ಸಂಘ ಪರಿವಾರದ ಪ್ರತಿಭಟನೆಗೆ ನನ್ನ ವಿರೋಧವಿದೆ ಎಂದು ಮಂಗಳೂರಿನ ಮಾಜಿ ಸಂಸದ ಜನಾರ್ಧನ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ.

ಈಗ ನೀವು ಹೇಳಿ - ಆಹ್ವಾನ ಪತ್ರಿಕೆಯಲ್ಲಿ ಇಬ್ರಾಹಿಂ ಅವರ ಹೆಸರು ಸೇರಿಸಿದ್ದು ಸರಿಯೋ ತಪ್ಪೋ? ಅವರ ಹೆಸರು ತೆಗೆದು ಹೊಸ ಆಮಂತ್ರಣ ಪತ್ರಿಕೆ ಹೊರಡಿಸುವುದು ಸರಿಯೋ ತಪ್ಪೋ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Printing muslim DC`s name on hindu temple event card has kicked up a row in Putturu, Dakshina dist. Bhajaranga Dal activists want DC, AB Ibrahim`s name to be removed. Puttur Mahalingeshwar temple annual jatra festival falls on 12 April.
Please Wait while comments are loading...