ಪಿಎಸ್ಐ ಪರೀಕ್ಷೆಯಲ್ಲಿ ವಿನೂತನ ಅಕ್ರಮ: ಬರೆದಿದ್ದು 21 ಪ್ರಶ್ನೆ, ಬಂದಿದ್ದು 100 ಅಂಕ!
ಬೆಂಗಳೂರು, ಏ. 11: ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ಆತ ಕೇವಲ 21 ಪ್ರಶ್ನೆಗಳಿಗೆ ಸರಿ ಉತ್ತರ ಬರೆದಿದ್ದ. ಆದರೆ ಫಲಿತಾಂಶದಲ್ಲಿ ಆತನಿಗೆ 100 ಪ್ರಶ್ನೆಗಳಿಗೂ ಸರಿ ಉತ್ತರ ಎಂದು ಅಂಕ ನೀಡಲಾಗಿತ್ತು. ಆತ ಪರೀಕ್ಷೆ ಬರೆದಿದ್ದ ವೇಳೆ ಪಡೆದಿದ್ದ OMR ಶೀಟ್ ತೆಗೆದ ನೋಡಿದಾಗ ಪೊಲೀಸರೇ ಅಕ್ರಮದ ಹೊಸ ಶೈಲಿ ನೋಡಿ ಗಾಬರಿಯಾಗಿದ್ದಾರೆ!
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಿಎಸ್ಐ ಆಗಿ ನೇಮಕವಾಗಿದ್ದ ಪ್ರಮುಖ ಆರೋಪಿ ವೀರೇಶ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ವೀರೇಶ್ ಜತೆಗೆ ಅನೇಕರು ಈ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಇತರೆ ಅರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಎಫ್ಐಆರ್ ಮಾಹಿತಿ:
ಕಲಬುರ್ಗಿ ಜ್ಞಾನ ಜ್ಯೋತಿ ಇಂಗ್ಲಿಷ್ ಮಿಡಿಯಮ್ ಶಾಲೆಯಲ್ಲಿ ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಏ.9 ರಂದು ಎಫ್ಐಆರ್ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ವೀರೇಶ್ ಹೆಸರು ಉಲ್ಲೇಖಿಸಿದ್ದು, ಇತರೇ ಅಪರಿಚತರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಸಿಐಡಿ ಪೊಲೀಸ್ ಇನ್‌ಸ್ಪೆಕ್ಟರ್ ದಿಲೀಪ್ ಕುಮಾರ್ ದೂರು ನೀಡಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ತನಿಖೆ ಆರಂಭಿಸುತ್ತಿದ್ದಂತೆ ಪ್ರಮುಖ ಆರೋಪಿ ವೀರೇಶ್ ನನ್ನು ಬಂಧಿಸಲಾಗಿದೆ.

ಅಚ್ಚರಿ ಮೂಡಿಸಿದ ಪರೀಕ್ಷೆ:
ಬಂಧಿತ ಅರೋಪಿ ವೀರೇಶ್ ಪಿಎಸ್ಐ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದ. ಕಲಬುರ್ಗಿ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ. ಈತ ಬರೆದಿದ್ದ ಉತ್ತರ ಹಾಳೆ (ಒಎಂಅರ್ ಶೀಟ್ ) ದೃಢೀಕರಣ ಪತ್ರ ಪರಿಶೀಲಿಸಿದಾಗ ಕೇವಲ 21 ಪ್ರಶ್ನೆಗಳಿಗೆ ಮಾತ್ರ ಸರಿ ಉತ್ತರ ಬರೆದಿದ್ದ. ಆದರೆ ನೇಮಕಾತಿ ವಿಭಾಗದಿಂದ ಪಡೆದ ದೃಢೀಕೃತ ಉತ್ತರ ಪತ್ರಿಕೆ ಪರಿಶೀಲನೆ ನಡೆಸಿದಾಗ ನೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದಿರುವುದು ದೃಢಪಟ್ಟಿತ್ತು.
ಪರೀಕ್ಷಾ ಕೇಂದ್ರದಲ್ಲಿ ವೀರೇಶ್ ಬರೆದಿದ್ದ ಉತ್ತರ ಹಾಳೆಯಲ್ಲಿ ಬರೆದಿದ್ದ 21 ಪ್ರಶ್ನೆಗಳ ಸರಿ ಉತ್ತರವನ್ನು ನೇಮಕಾತಿ ವಿಭಾಗದ ಉತ್ತರ ಪತ್ರಿಕೆಯಲ್ಲಿ ಇರುವುದು ದೃಢಪಟ್ಟಿದೆ. ಅಂದರೆ ಪರೀಕ್ಷಾ ಕೇಂದ್ರದಲ್ಲಿ ಬರೆದ ಉತ್ತರ ಹಾಳೆಯನ್ನು ವೀರೇಶ್ ನೀಡಿಲ್ಲ. ಅದರ ಬದಲಿಗೆ ಬೇರೆಲ್ಲೋ ಎಲ್ಲಾ ಪ್ರಶ್ನೆಗಳಿಗೆ ಬರೆದ ಉತ್ತರ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗಿದೆ. ಹೀಗಾಗಿ ಇದರಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿಯೂ ಶಾಮೀಲಾಗಿದ್ದರೇ? ಹಣ ಪಡೆದು ಬೇರೆಲ್ಲೋ ಬರೆಸಿದ ಉತ್ತರ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆಯೇ? ಪಿಎಸ್ಐ ನೇಮಕಾತಿ ವಿಭಾಗಕ್ಕೆ ನೂರಕ್ಕೆ ನೂರು ಸರಿ ಉತ್ತರ ಬರೆದಿರುವ ವೀರೇಶ್ ನಕಲಿ ಉತ್ತರ ಪತ್ರಿಕೆ ಯಾರು ತಲುಪಿಸಿದರು ಎಂಬ ಪ್ರಶ್ನೆಗಳು ಎದ್ದಿವೆ.

ಅಚ್ಚರಿ ಏನೆಂದರೆ ಎರಡೂ ಉತ್ತರ ಪತ್ರಿಕೆಗಳಲ್ಲಿ ಪರೀಕ್ಷಾ ಪರಿವೀಕ್ಷಕರ ಸಹಿ ಮತ್ತು ಅಭ್ಯರ್ಥಿಯ ಸಹಿ ಹೋಲಿಕೆಯಾಗಿದ್ದು, ಪರೀಕ್ಷಾ ಕೇಂದ್ರದಲ್ಲಿಯೇ ಎಡವಟ್ಟು ಅಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಇದರ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಹೊರಗಿನಿಂದ ಬರೆದ ಉತ್ತರ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಯಾರು ತಪಿಸಿದರು ? ಅವರಿಗೆ ಪೊಲೀಸ್ ಇಲಾಖೆ ಮುದ್ರಿಸಿದ ಉತ್ತರ ಪತ್ರಿಕೆ ಹೆಚ್ಚುವರಿ ಪ್ರತಿ ಹೇಗೆ ಲಭ್ಯವಾಯಿತು ? ಪರೀಕ್ಷಾ ಕೇಂದ್ರದಲ್ಲಿಯೇ ಪರ್ಯಾಯವಾಗಿ ಹಣಕೊಟ್ಟ ಅಭ್ಯರ್ಥಿಗಳ ಹೆಸರಿನಲ್ಲಿ ಪರೀಕ್ಷೆ ಬರೆದು ಅದೇ ಉತ್ತರ ಪತ್ರಿಕೆಗಳನ್ನು ನೀಡಲಾಯಿತೇ ?
ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು:
ವೀರೇಶ್ ಪರೀಕ್ಷಾ ಕೇಂದ್ರದಲ್ಲಿ ತನಗೆ ಗೊತ್ತಿದ್ದ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಪರೀಕ್ಷೆ ಮುಗಿದ ಬಳಿಕ ಇತರರ ಜತೆ ಸೇರಿಕೊಂಡು ಅದೇ ಉತ್ತರ ಪತ್ರಿಕೆಯನ್ನು ವಾಪಸು ಪಡೆದು ಸರಿ ಉತ್ತರಗಳನ್ನು ಅದೇ ಉತ್ತರ ಪತ್ರಿಕೆಯಲ್ಲಿ ತುಂಬಿದ್ದಾನೆ. ಹೀಗಾಗಿ ಪರೀಕ್ಷಾ ಕೇಂದ್ರದಲ್ಲಿ ಉತ್ತರ ಪತ್ರಿಕೆ ಕೊಡುವಾಗ ಉತ್ತರ ಪ್ರತಿ ಓಎಂರ್ ಶೀಟ್ (ಅಭ್ಯರ್ಥಿ ಪ್ರತಿ) ಪಡೆದಿದ್ದು, ಅದರಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಉಳಿದ ಪ್ರಶ್ನೆಗಳಿಗೆ ಉತ್ತರ ಬರೆಯದೇ ಖಾಲಿಬಿಟ್ಟಿದ್ದು, ಪರೀಕ್ಷಾ ಅವಧಿ ಮುಗಿದ ಬಳಿಕ ಇತರರ ಜತೆ ಸೇರಿಕೊಂಡು ಅದೇ ಉತ್ತರ ಪತ್ರಿಕೆ ಪಡೆದು ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ತುಂಬಿ ಅಕ್ರಮ ಎಸಗಿರುವುದು ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅದೇ ಉತ್ತರ ಪತ್ರಿಕೆಯನ್ನು ಪೊಲೀಸ್ ನೇಮಕಾತಿ ವಿಭಾಗಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದು, ಈ ಅಕ್ರಮದ ಹಾದಿ ಮೂಲಕ ವೀರೇಶ್ ಪಿಎಸ್ಐ ಹುದ್ದೆಗೆ ಅಯ್ಕೆಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇದೀಗ ಇದೇ ರೀತಿ ಅತಿ ಹೆಚ್ಚು ಅಂಕ ಪಡೆದ ಕಲಬುರ್ಗಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ. ಈ ಜಾಲದಲ್ಲಿ ಪರೀಕ್ಷಾ ಸಿಬ್ಬಂದಿ ಸಹ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸರಣಿ ಬಂಧನವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನೊಂದ ಅಭ್ಯರ್ಥಿಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಅಫ್ಜಲ್ ಪುರ ತಾಲೂಕು ಒಂದರಿಂದಲೇ 56 ಅಭ್ಯರ್ಥಿಗಳು ನೇಮಕವಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಒಬ್ಬ ಸಿಕ್ಕಿಬಿದ್ದಿದ್ದು, ಇದೇ ರೀತಿ ಅಕ್ರಮ ಎಸಗಿರುವ ಇತರರರು ಸಿಕ್ಕಿ ಬೀಳುವ ಸಾಧ್ಯತೆಯಿದೆ.
ಪ್ರಾಮಾಣಿಕರಿಗೆ ಅನ್ಯಾಯ:
ಇನ್ನು ವರ್ಷಗಳಿಂದ ಪಿಎಸ್ಐ ಕನಸು ಕಟ್ಟಿಕೊಂಡು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಕಂಗಾಲು ಆಗುವಂತಾಗಿದೆ. ಪಿಎಸ್ಐ ನೇಮಕಾತಿ ಸಂಬಂಧ ಅಕ್ರಮ ಸಿಐಡಿ ತನಿಖೆ ನಡೆಸುತ್ತಿರುವ ಕಾರಣ ಇದಕ್ಕೆ ತಾರ್ಕಿಕ ಅಂತ್ಯ ಸಿಗುವ ವರೆಗೂ ನೇಮಕಾತಿ ಪ್ರಕ್ರಿಯೆ ಮಾಡಲು ಅಸಾಧ್ಯ. ಹೀಗಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಪರಿಸ್ಥಿತಿ ಕೂಡ ಡೋಲಾಯಮಾನವಾಗಿದೆ.












Click it and Unblock the Notifications