ಶನಿವಾರ ಪೊಲೀಸರ ರಜಾ ಮುಷ್ಕರ ನಡೆಯುವುದು ಡೌಟಾ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 03 : ಸರಕಾರದ ನಿರ್ಲಕ್ಷ್ಯದಿಂದ ರೋಸತ್ತಿರುವ ಕರ್ನಾಟಕ ಪೊಲೀಸರು ಜೂನ್ 4ರಂದು ಶನಿವಾರ ಸಾರ್ವತ್ರಿಕವಾಗಿ ರಜಾ ಹಾಕಿ ಪ್ರತಿಭಟನೆಗೆ ಇಳಿಯಲು ಮುಂದಾಗಿದ್ದರೆ, ಮುಷ್ಕರಕ್ಕಿಳಿದರೆ ಎಸ್ಮಾ ಕಾಯ್ದೆ ಜಾರಿ ಮಾಡಲಾಗುವುದು ಎಂದು ಸರಕಾರ ಬೆದರಿಕೆಯೊಡ್ಡಿದೆ. ಪೊಲೀಸರ ಮುಷ್ಕರ ನಡೆಯುವುದೆ?

ನಡೆಯಲಿ ಬಿಡಲಿ ಈ ಹೋರಾಟ ಪೊಲೀಸರಿಗೆ ಸಿಕ್ಕ ಮೊದಲ ಜಯವಾಗಿದೆ. ಕಡಿಮೆ ಸಂಬಳ, ಸೌಲಭ್ಯಗಳ ಕೊರತೆ ಮುಂತಾದ ವಿಷಯಗಳನ್ನು ಎತ್ತಿಕೊಂಡು ಸರಕಾರದ ವಿರುದ್ಧ, ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ದಂಗೆಯೆದ್ದಿದ್ದಾರೆ. ಒಟ್ಟು ಹದಿನೈದು ಸಾವಿರ ಪೊಲೀಸ್ ಪೇದೆಗಳು ರಜಾ ಹಾಕಿ ಬೆದರಿಕೆಯೊಡ್ಡಿದ್ದಾರೆ.

ಎಂದೂ ಕಂಡರಿಯದ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಪೇದೆಗಳ ಎಲ್ಲ ಸಮಸ್ಯೆಗಳನ್ನೂ ಆಲಿಸಿ, ಸೂಕ್ತವಾಗಿ ಬಗೆಹರಿಸಲಾಗುವುದು ಎಂಬ ವಾಗ್ದಾನವನ್ನು ನೀಡಿದ್ದಾರೆ ಮತ್ತು ವಾರಕ್ಕೊಂದು ದಿನ ಕಡ್ಡಾಯವಾಗಿ ರಜಾ ನೀಡಲೇಬೇಕು ಎಂದು ಸುತ್ತೋಲೆ ಹೊರಡಿಸಿದ್ದಾರೆ. [ಪೊಲೀಸರಿಗೆ ವಾರದ ರಜೆ ಕಡ್ಡಾಯ: ಮೇಘರಿಖ್]

Protest by Karnataka constables a success even if not held

ಮುಷ್ಕರ ನಡೆಯುವುದೇ ಡೌಟು!

ಒನ್ಇಂಡಿಯಾಗೆ ಇದೀಗ ತಿಳಿದುಬಂದಿರುವ ಬಲ್ಲ ಮೂಲಗಳ ಪ್ರಕಾರ, ಜೂನ್ 4, ಶನಿವಾರದಂದು ಪೊಲೀಸ್ ಪೇದೆಗಳು ಮುಷ್ಕರ ಹೂಡುವ ಸಾಧ್ಯತೆಗಳು ತುಂಬಾ ಕಡಿಮೆಯಿದೆ. ಮತ್ತೆ ಕೆಲಸಕ್ಕೆ ಹಾಜರಾಗುವುದು ಹೆಚ್ಚೂಕಡಿಮೆ ಖಚಿತವಾಗಿ ಕಾಣಿಸುತ್ತಿದೆ.

ಇದಕ್ಕೆ ಎರಡು ಕಾರಣಗಳಿವೆ. ಒಂದು, ಕೆಲಸಕ್ಕೆ ಹಾಜರಾಗದಿದ್ದರೆ ಎಸ್ಮಾ ಕಾಯ್ದೆ ಜಾರಿ ಮಾಡಿ ಮುಷ್ಕರನಿರತ ಪೊಲೀಸ್ ಪೇದೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿದ್ದು. ಮತ್ತೊಂದು, ಎಚ್ಚೆತ್ತುಕೊಂಡಿರುವ ಇಲಾಖೆ ತಕ್ಷಣ ಕೆಲವೊಂದು ಕ್ರಮಗಳನ್ನು ತೆಗೆದುಕೊಂಡಿರುವುದು.

ಕೆಲವೊಂದು ಉಪ ಪೊಲೀಸ್ ಆಯುಕ್ತರು ಪ್ರತಿಭಟನೆಗೆ ಇಳಿಯಲಿರುವ ಪೊಲೀಸ್ ಕಾನ್‌ಸ್ಟೇಬಲ್ ಮನೆಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಪರಿಹಾರ ದೊರಕಿಸಿಕೊಡುವ ವಾಗ್ದಾನ ನೀಡುತ್ತಿದ್ದಾರೆ. ಇದು ಮುಷ್ಕರವನ್ನು ಹತ್ತಿಕ್ಕಲು ಸಹಾಯ ಮಾಡಿದೆ. [ಪೊಲೀಸರ ಮುಷ್ಕರ ಬೆಂಬಲಿಸಿ ಬೆಂಗಳೂರಲ್ಲಿ ಸಹಿಸಂಗ್ರಹ]

ಕಾಡುತ್ತಿರುವ ಹಲವಾರು ಸಮಸ್ಯೆಗಳು

ಕೆಲ ಪೊಲೀಸ್ ಪೇದೆಗಳು ಕಳಪೆ ಗುಣಮಟ್ಟದ ವಸತಿ ಸಮುಚ್ಚಯದಲ್ಲಿ ಬದುಕುತ್ತಿದ್ದಾರೆ. ಕ್ವಾರ್ಟರ್ಸ್ ಸಿಗದ ಕೆಲವರು ದೂರದ ಪ್ರದೇಶದಲ್ಲಿ ಕಡಿಮೆ ಬಾಡಿಗೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಗೋಡೆ ಬಿರುಕು ಬಿಟ್ಟಿರುವುದು, ಸೋರುವುದು, ನಲ್ಲಿಗಳಿಲ್ಲದಿರುವುದು, ಸುತ್ತಮುತ್ತ ಸ್ವಚ್ಛತೆ ಇಲ್ಲದಿರುವುದು. ಹೀಗೆ ಮುಂತಾದ ಸಮಸ್ಯೆಗಳು ಅವರನ್ನು ಕಾಡುತ್ತಿರುವುದು ಸತ್ಯ.

ಒಂದು ವೇಳೆ ಎಸ್ಮಾ ಜಾರಿಯಾಗಿ, ಪೊಲೀಸ್ ಪೇದೆ ಮುಷ್ಕರದಲ್ಲಿ ನಿರತರಾದರೆ ಬಂಧನಕ್ಕೊಳಗಾಗುವ ಸಂಭವನೀಯತೆ ಹೆಚ್ಚು. ಹೀಗಾದರೆ, ದೈನಂದಿನ ಜೀವನ ಸಾಗಿಸಲು ಖರ್ಚುವೆಚ್ಚ, ಕೋರ್ಟಿನ ವೆಚ್ಚ ಭರಿಸುವುದೆಂತು? ಸಿಗುವ ಸಂಬಳವೂ ಕಡಿಮೆಯೆ. ಇದು ಮುಷ್ಕರ ಹಿಂತೆಗೆದುಕೊಳ್ಳಲು ಮತ್ತೊಂದು ಕಾರಣ. ಅವರ ಪಗಾರ ಹೆಚ್ಚು ಮಾಡುವ ವಾಗ್ದಾನ ನೀಡಲಾಗಿದೆ. [ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು]

ಪ್ರತಿಭಟನೆ ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ

ಪೊಲೀಸ್ ಪೇದೆಗಳು ಪ್ರತಿಭಟನೆ ನಡೆಸದಿದ್ದರೇನಂತೆ, ಅವರ ಕುಟುಂಬದವರು ಮುಷ್ಕರದಲ್ಲಿ ಪಾಲ್ಗೊಂಡರೆ ಅಚ್ಚರಿಯಿಲ್ಲ. ಹೀಗಾಗಿ, ಮುಷ್ಕರ ಹಿಂತೆಗೆದುಕೊಳ್ಳಲಾಗಿದೆ ಎಂದು ಸಂಪೂರ್ಣವಾಗಿ ಹೇಳುವಂತಿಲ್ಲ. ಏನಾಗುತ್ತೋ ಕಾದು ನೋಡೋಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The mass leave protest planned the constables of the Karnataka could well be a success even if it is not held. An organisation which claimed to have 15,000 constables as part of it had threatened to go on mass leave protesting against difficult working conditions and a low pay scale.
Please Wait while comments are loading...