Gram Panchayat; ಕಾರ್ಯದರ್ಶಿಗೆ PDO ಹುದ್ದೆಗೆ ಬಡ್ತಿ, ಹೊಸ ಆದೇಶ
ಬೆಂಗಳೂರು, ಅಕ್ಟೋಬರ್ 09; ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತಿಗಳ ಹಂತದಲ್ಲಿ ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗೆ ಬಡ್ತಿ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಈ ಕುರಿತು ಮಾಹಿತಿ ನೀಡಿದೆ.
ಆಯುಕ್ತರು, ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಆದೇಶ 29/03/2023, ಸರ್ಕಾರದ ಆದೇಶ 15/07/2023 ಮತ್ತು ಸರ್ಕಾರದ ಪತ್ರ ಸಂಖ್ಯೆ 12/09/2023 ಉಲ್ಲೇಖ ಮಾಡಿದ್ದಾರೆ.

ಆದೇಶದ ವಿವರ; ಈ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಆದೇಶದಲ್ಲಿ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ರಾಜ್ಯ ವೃಂದವನ್ನಾಗಿ ಪರಿಗಣಿಸಿ, ಈ ಹುದ್ದೆಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಗಳನ್ನು ನೇಮಿಸಲಾಗಿದೆ ಎಂದು ಹೇಳಿದೆ.
ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವಾಗಿ ಸರ್ಕಾರ ಹಾಗೂ ಇನ್ನುಳಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವಾಗಿ ಆಯುಕ್ತರು, ಪಂಚಾಯತ್ ರಾಜ್ ಇವರನ್ನು ನೇಮಿಸಿ ಆದೇಶಿಸಲಾಗಿರುತ್ತದೆ.
ಅದರಂತೆ, ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಬಡ್ತಿ ನೀಡುವ ಅಧಿಕಾರವು ಆಯುಕ್ತರು, ಪಂಚಾಯತ್ ರಾಜ್, ಇವರದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪಂಚಾಯತಿಗಳಲ್ಲಿನ ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಜೇಷ್ಠತೆಯ ಆಧಾರದ ಮೇಲೆ ಒಗ್ಗೂಡಿಸಿದ ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ತಯಾರಿಸಿ, ಅದರನುಸಾರ ಜೇಷ್ಠತೆಯುಳ್ಳ ಅರ್ಹರನ್ನು ಬಡ್ತಿಗೆ ಪರಿಗಣಿಸಿ, ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಬಡ್ತಿ ಪ್ರಕ್ರಿಯೆಯ ಕುರಿತು ಕ್ರಮವಹಿಸುವುದಾಗಿರುತ್ತದೆ.
ಆದರೆ, ದಿನಾಂಕ 29/03/2023ರ ನಂತರವೂ ರಾಜ್ಯದ ಕೆಲವು ಜಿಲ್ಲಾ ಪಂಚಾಯತಿಗಳಲ್ಲಿ ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಪದೋನ್ನತಿಯನ್ನು ನೀಡಿರುವುದು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ 29/03/2023ರ ನಂತರ ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಪದೋನ್ನತಿಯನ್ನು ನೀಡಿರುವಂತಹ ಆದೇಶಗಳನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯತಿಗಳು ಕೂಡಲೇ ಹಿಂಪಡೆದು, ಅದರ ಬಗ್ಗೆ ವರದಿಯನ್ನು ಪಂಚಾಯತ್ ರಾಜ್ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ತಿಳಿಸಿದೆ.
ಇನ್ನುಮುಂದೆ ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಪದೋನ್ನತಿಯನ್ನು ನೀಡಲು ಜಿಲ್ಲಾ ಪಂಚಾಯತಿ ಹಂತದಲ್ಲಿ ಯಾವುದೇ ಕ್ರಮಕೈಗೊಳ್ಳದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಹುದ್ದೆಗಳ ವಿವರ; ಈ ವರ್ಷದ ಜುಲೈನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ರಾಜ್ಯದಲ್ಲಿ ಒಟ್ಟು ಮಂಜೂರಾಗಿರುವ ಹುದ್ದೆಗಳು 2194. ಇವುಗಳಲ್ಲಿ ಸದ್ಯ 604 ಹುದ್ದೆ ಖಾಲಿ ಇದೆ.
ಪ್ರಸ್ತುತ ಖಾಲಿ ಇರುವ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-2 ಹುದ್ದೆಗಳ ವಿವರ, ಒಟ್ಟು ಮಂಜೂರಾದ ಹುದ್ದೆಗಳ ವಿವರಗಳನ್ನು ಶಾಸಕರು ಕೇಳಿದ್ದರು. ಸರ್ಕಾರ ಈ ಕುರಿತು ಕಲಾಪದಲ್ಲಿ ಮಾಹಿತಿ ನೀಡಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಉತ್ತರದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 2194 ಹುದ್ದೆಗಳು ಮಂಜೂರಾಗಿವೆ. 1590 ಹುದ್ದೆಗಳು ಭರ್ತಿಯಾಗಿವೆ. 604 ಹುದ್ದೆಗಳು ಖಾಲಿ ಇವೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-2 3827 ಹುದ್ದೆಗಳು ಮಂಜೂರಾಗಿವೆ. 3108 ಹುದ್ದೆಗಳು ಭರ್ತಿಯಾಗಿವೆ. 345 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ಕೊಟ್ಟಿದ್ದರು.












Click it and Unblock the Notifications