ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ; ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 17 : "ಪಾಕಿಸ್ತಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ ಬಗ್ಗೆ ವರದಿ ಕೇಳಿದ್ದೇನೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ವಿದ್ಯಾರ್ಥಿಗಳನ್ನು ಪುನಃ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವರು, "ಈಗಾಗಲೇ ಆ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತದೆ" ಎಂದರು.
"ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಕಠಿಣವಾದ ಕಾನೂನು ಕ್ರಮವನ್ನು ಜರುಗಿಸತ್ತೇವೆ. ಇಲಾಖೆಯಲ್ಲಿ ಯಾವುದೇ ಗೊಂದಲವಿಲ್ಲ. ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದು ಏಕೆ?, ಏಕೆ ಹೀಗಾಗಿದೆ? ಎಂಬ ವರದಿ ಕೇಳಿದ್ದೇನೆ" ಎಂದು ಸಚಿವರು ಹೇಳಿದರು.
ಮೂವರು ವಿದ್ಯಾರ್ಥಿಗಳನ್ನು ಸೋಮವಾರ ಬಂಧಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

ಮೂವರು ವಿದ್ಯಾರ್ಥಿಗಳು
ಹುಬ್ಬಳ್ಳಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕಾಶ್ಮೀರದ ಬಾರಮುಲ್ಲಾದ ಅಮೀರ್ ವಾನಿ, ತಾಲೀಬ್ ಮಜೀದ್ ಮತ್ತು ಬಾಸಿತ್ ಸೋಫಿ ಪಾಕಿಸ್ತಾನ ಪರವಾಗಿ ಘೋಷಣೆಗಳನ್ನು ಕೂಗಿದ್ದರು.

ಪೊಲೀಸರ ಕ್ರಮಕ್ಕೆ ವಿರೋಧ
ಬಂಧಿತ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ವಿಚಾರಣೆ ನಡೆಸಿದ್ದರು. ಭಾನುವಾರ ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಸಿ. ಆರ್. ಪಿ. ಸಿ 169 ಕಾಯ್ದೆ ಅಡಿಯಲ್ಲಿ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿತ್ತು. ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ವರದಿ ಕೇಳಿದ್ದಾರೆ.

ಮತ್ತೆ ಬಂಧಿಸಿದ ಪೊಲೀಸರು
ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಮುಖಂಡರು ಭಾನುವಾರ ಸಂಜೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಆರೋಪಿಗಳ ಮೇಲೆ ಹಲ್ಲೆ
ಮೂವರು ಆರೋಪಿಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ. ನ್ಯಾಯಾಲಯದಿಂದ ಆರೋಪಿಗಳನ್ನು ಕರೆದುಕೊಂಡು ಹೋಗುವಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಚಪ್ಪಲಿಗಳನ್ನು ತೂರಲಾಗಿದೆ.

ಯಾವ-ಯಾವ ಪ್ರಕರಣಗಳು
ಪಾಕಿಸ್ತಾನ ಪರವಾಗಿ ಘೋಷಣೆಗಳನ್ನು ಕೂಗಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153 (ಎ), 153ಬಿ (ಸಿ), 505 (2) ಪ್ರಕರಣ ದಾಖಲಿಸಿ, ಕೋಮು ಸೌಹಾರ್ದ ಕದಡುವ ಹಾಗೂ ದೇಶದ್ರೋಹದ ಆರೋಪದಡಿ ಬಂಧಿಸಲಾಗಿದೆ.












Click it and Unblock the Notifications