Priyank Kharge: ರಾಜಕೀಯದಲ್ಲಿ ನೆಪೋಟಿಸಂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿಯ ಹೇಳಿಕೆ!
ರಾಜಕೀಯದಲ್ಲಿ ನೆಪೋಟಿಸಂ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದು ನನ್ನ ಕುಟುಂಬದ ಹೆಸರು ಅಲ್ಲ, ನನ್ನ ಕೆಲಸ ಮತ್ತು ಚಿತ್ತಾಪುರದ ಜನತೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ನೆಪೋಟಿಸಂ ಎನ್ನುವುದು ಅವಕಾಶದ ಮೆಟ್ಟಿಲಾಗಬಹುದು. ಆದರೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಸ್ವಸಾಮರ್ಥ್ಯದಿಂದ ಮಾತ್ರ ಸಾಧ್ಯ. ಸಿನಿಮಾ ನಟರೇ ಆಗಿರಲಿ ಅಥವಾ ರಾಜಕಾರಣಿಗಳ ಮಕ್ಕಳೇ ಆಗಿರಲಿ, ಜನರ ವಿಶ್ವಾಸ ಗಳಿಸಲು ಸಾಧ್ಯವಾಗದೆ ಹೋದಲ್ಲಿ ಸೋಲು ಖಚಿತ. ಹಾಗೆ ನಾನು ನಾಲ್ಕು ಬಾರಿ ಚುನಾವಣೆಗೆ ನಿಂತು ಮೂರು ಬಾರಿ ಗೆದ್ದಿದ್ದೇನೆ. ಸಮಾಜಕಲ್ಯಾಣ ಇಲಾಖೆ ಸಚಿವನಾಗಿದ್ದೇನೆ, ಐಟಿಬಿಟಿ ಸಚಿವನಾಗಿದ್ದೇನೆ, ಈಗ ಗೃಹ ಸಚಿವನಾಗಿದ್ದೇನೆ. ಆದರೆ ಮೊದಲ ಬಾರಿ ಗೆದ್ದ ವಿಜಯೇಂದ್ರರವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ವಂಶರಾಜಕಾರಣ ಎನಿಸುವುದಿಲ್ಲ. ಆದರೆ ನಾನು ಸಚಿವನಾದರೆ ಕುಟುಂಬ ರಾಜಕಾರಣವೇ? ನೆಪೋಟಿಸಂ ಕುರಿತಾದ ಪ್ರಶ್ನೆಗಳು ಕಾಂಗ್ರೆಸ್ ಪಕ್ಷಕ್ಕೆ ಏಕೆ ಸೀಮಿತವಾಗಿರುತ್ತವೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ನನ್ನ ಭವಿಷ್ಯವನ್ನು ನಿರ್ಧರಿಸುವುದು ಇಬ್ಬರು ಮಾತ್ರ. ನನ್ನನ್ನು ಗೆಲ್ಲಿಸಬೇಕೋ, ಸೋಲಿಸಬೇಕೋ ಎಂಬುದನ್ನು ನನ್ನ ಕ್ಷೇತ್ರವಾದ ಚಿತ್ತಾಪುರದ ಜನತೆ ನಿರ್ಧರಿಸುತ್ತಾರೆ. ನನಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನನ್ನ ನಿಲುವು ಬಹಳ ಸರಳ. ಮೊದಲು ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಉಳಿದಿದ್ದನ್ನು ಜನತೆ ಮತ್ತು ಹೈಕಮಾಂಡ್ ತೀರ್ಮಾನಿಸುತ್ತಾರೆ ಎಂದಿದ್ದಾರೆ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ: ಜಿ. ಪರಮೇಶ್ವರ್
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 4 ಯೋಜನೆಗಳಿಗೆ 2026-27ನೇ ಸಾಲಿಗೆ ಅರ್ಜಿ ಆಹ್ವಾನಿಸುವ ಕರಪತ್ರಗಳನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಬಿಡುಗಡೆ ಮಾಡಿದರು.
ಆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಆರ್ಯ ವೈಶ್ಯ ಸಮುದಾಯದವರಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಕೃಷಿಗೆ ಮತ್ತು ಆಹಾರ ತಯಾರಿಕೆಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಿ, ಆರ್ಯ ವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ʼಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮʼವನ್ನು ಸ್ಥಾಪಿಸಿರುವುದಾಗಿ ತಿಳಿಸಿದರು.
ಕಳೆದ 7 ವರ್ಷಗಳಿಂದ ನಿಗಮಕ್ಕೆ ಬಿಡುಗಡೆಯಾದ ಅನುದಾನ ಹಾಗೂ ಮರುಪಾವತಿ ಮೊತ್ತ ಸೇರಿಸಿ ಒಟ್ಟು ₹85 ಕೋಟಿಗಳಲ್ಲಿ 16,785 ಫಲಾನುಭವಿಗಳಿಗೆ ಸಾಲ - ಸಬ್ಸಿಡಿ ಮತ್ತು ಶುಲ್ಕ ಮರುಪಾವತಿ ನೀಡಿ ಶೇ.96ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. ಮುಂದುವರಿದು, ₹11 ಕೋಟಿ ಸಾಲ ಮರುಪಾವತಿಯನ್ನು ಪಡೆಯುವಲ್ಲಿ ನಿಗಮವು ಯಶಸ್ವಿಯಾಗಿರುತ್ತದೆ ಹಾಗೂ 740 ಫಲಾನುಭವಿಗಳು ಪೂರ್ಣಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಿರುವುದು ಈ ನಿಗಮದ ವಿಶಿಷ್ಟ ಸಾಧನೆಯಾಗಿದೆ ಎಂದರು.
2026-27ನೇ ಸಾಲಿಗೆ ಎಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಕ್ಟೋಬರ್ 15ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆರ್ಯ ವೈಶ್ಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿ. ಪರಮೇಶ್ವರ್ ಅವರು ಮನವಿ ಮಾಡಿದ್ದಾರೆ.


Click it and Unblock the Notifications
