Private Bus Fare Hike: ರಾಜ್ಯದಲ್ಲಿ ಇಂದಿನಿಂದ ಖಾಸಗಿ ಬಸ್ ಪ್ರಯಾಣ ದರ ಬಲು ದುಬಾರಿ, ಶೇಕಡ 5ರಿಂದ 8ರಷ್ಟು ಹೆಚ್ಚಳ
Private Bus Fare: ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಬೇಸತ್ತಿದ್ದಾರೆ. ಈ ನಡುವೆ ಇದೀಗ ಇಂದಿನಿಂದ (ಜೂನ್ 9) ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇಕಡಾ 5 ರಿಂದ 8ರಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರಾಜ್ಯ ಖಾಸಗಿ ಮಜಲು ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿ ನಗರದ ಡಯಾನ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ಉದ್ಯಮ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಿದರು. 'ಕಳೆದ ವರ್ಷದ ಹಿಂದೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಿತ್ತು. ಇತ್ತ ಕೇಂದ್ರ ಸರ್ಕಾರ ಕೂಡ ನಾಲ್ಕು ಬಾರಿ ಒಟ್ಟು 8.17 ರೂಪಾಯಿನಷ್ಟು ದರ ಹೆಚ್ಚಳ ಮಾಡಿದೆ,' ಎಂದು ಹೇಳಿದ್ದಾರೆ.

ಸುರೇಶ್ ನಾಯಕ್ ಹೇಳಿದ್ದೇನು?
'ಡೀಸೆಲ್ ದರ ಏರಿಕೆಯಿಂದಾಗಿ ವಾಹನಗಳ ಬಿಡಿಭಾಗಗಳು, ದಿನನಿತ್ಯದ ರಿಪೇರಿ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ಅಲ್ಲದೆ, ನೌಕರರ ಸಂಬಳ, ವಾಹನ ವಿಮೆ, ಟೋಲ್ ದರ ಸೇರಿದಂತೆ ಇತರ ದರಗಳ ಹೆಚ್ಚಾಗಿದ್ದು, ಮಾಲೀಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಬಸ್ ಉದ್ಯಮವನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಲು ಮತ್ತು ಉದ್ಯಮದ ಉಳಿವಿನ ದೃಷ್ಟಿಯಿಂದ ಸರ್ಕಾರದ 2020ರ ಅಧಿಸೂಚನೆಯ ನಿಯಮಗಳ ಅನ್ವಯ ಈ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ,' ಎಂದು ಸುರೇಶ್ ನಾಯಕ್ ಸ್ಪಷ್ಟಪಡಿಸಿದರು.
'ವಿದ್ಯಾರ್ಥಿಗಳಿಗೆ ಯಾವುದೇ ಹೊರೆ ಇರುವುದಿಲ್ಲ'
ಖಾದಗಿ ಬಸ್ ಪ್ರಮಾಣ ದರ ಹೆಚ್ಚಳವಾಗಿದ್ದರೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಹಳೇ ಪ್ರಯಾಣ ದರ ರಿಯಾಯಿತಿ ಎಂದಿನಂತೆ ಮುಂದುವರಿಯಲಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹೆಚ್ಚುವರಿ ಹಣಕಾಸಿನ ಹೊರೆ ಬೀಳುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಹಳೆಯ & ಪರಿಷ್ಕೃತ ದರ ಪಟ್ಟಿ
ಉಡುಪಿ - ಮಂಗಳೂರು: 95 ರೂಪಾಯಿ - 100 ರೂಪಾಯಿ
ಕುಂದಾಪುರ - ಉಡುಪಿ: 60 ರೂಪಾಯಿ - 63 ರೂಪಾಯಿ
ಉಡುಪಿ - ಮಣಿಪಾಲ: 12 ರೂಪಾಯಿ - 15 ರೂಪಾಯಿ
ದರ ಏರಿಕೆಗೆ ಪ್ರಮುಖ ಕಾರಣಗಳು
* ಇಂಧನ ಮತ್ತು ಟೋಲ್ ದರ ಏರಿಕೆ: ಡೀಸೆಲ್ ದರ ಹಾಗೂ ಟೋಲ್ ಪ್ಲಾಜಾಗಳಲ್ಲಿನ ಶುಲ್ಕ ನಿರಂತರವಾಗಿ ಹೆಚ್ಚುತ್ತಿರುವುದು ಮಾಲೀಕರಿಗೆ ದೊಡ್ಡ ಹೊರೆಯಾಗಿದೆ.
* ಬಿಡಿಭಾಗಗಳ ಬೆಲೆ ಏರಿಕೆ: ಬಸ್‌ಗಳ ಟೈರ್, ಟೈರ್ ರಿಸೋಲಿಂಗ್ (ರೀ-ಬಟನಿಂಗ್) ಮತ್ತು ಇತರ ಅಗತ್ಯ ಬಿಡಿಭಾಗಗಳ (ಸ್ಪೇರ್ ಪಾರ್ಟ್ಸ್) ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ.
* ರಾಜ್ಯ ಸರ್ಕಾರದ ಅಧಿಕೃತ ಅಧಿಸೂಚನೆಯ ನಿಯಮಗಳ ಅನ್ವಯವೇ ಅಗತ್ಯ ಸೆಸ್ (ತೆರಿಗೆ) ಅಳವಡಿಸಿ ಈ ದರವನ್ನು ಪರಿಷ್ಕರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications