ಗಣೇಶೋತ್ಸವ ವಿವಾದಕ್ಕೆ ರಾಜಕೀಯ ಟ್ವಿಸ್ಟ್; ಪ್ರತಾಪ್ ಸಿಂಹ-KPYCC ಮಂಜುನಾಥ್ ನಡುವೆ ಜಟಾಪಟಿ
ಬೆಂಗಳೂರು: ಬಿಜೆಪಿಯವರೇ ಬಾಗಿಲು ಮುಚ್ಚಿದ್ದಾರೆ. ಬಿಜೆಪಿ ಕಚೇರಿ ಬಾಗಿಲು ತೆಗೆದು ಟಿಕೆಟ್ ಗಿಟ್ಟಿಸಿಕೊಳ್ಳಲು ನಿಮ್ಮ ಕೈಯಿಂದ ಆಗಿಲ್ಲ. ನೀವು ಬಾಂಬ್ ಕೊಟ್ಟು ನಿಮ್ಮ ಚೇಲಾಗಳನ್ನು ಸಂಸತ್ತಿಗೆ ನುಗ್ಗಿಸಿದಷ್ಟು ಸುಲಭವಲ್ಲ ಠಾಣೆಗೆ ನುಗ್ಗುವುದು ಎಂದು ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಸಮಿತಿ (KPYCC) ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಅವರು ಟಾಂಗ್ ನೀಡಿದ್ದಾರೆ.
ಮೈಸೂರಿನ ಟಿ.ನರಸೀಪುರದಲ್ಲಿ ಗಣೇಶೋತ್ಸವ ವೇಳೆ ಮಸೀದಿ ಬಳಿ ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸದಂತೆ ಹಿಂದೂ ಯುವಕರಿಗೆ ಪೊಲೀಸ್ ಇನ್‌ಪೆಕ್ಟರ್ ಎಚ್ಚರಿಕೆ ನೀಡಿದ್ದರು. ಈ ವಿಚಾರ ಧರ್ಮ ರಾಜಕಾರಣ, ಹಿಂದೂಗಳ ಧಾರ್ಮಿಕ ಆಚರಣೆಗೆ ಅಡಚರಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಚರ್ಚೆಗೆ, ವಿವಾದಕ್ಕೆ ನಾಂದಿ ಹಾಡಿತು. ಇತರ ಧರ್ಮಿಯರ ಆಚರಣೆ ವೇಳೆ ಇಲ್ಲದ ಕಠಿಣ ರೂಲ್ಸ್ ಹಿಂದೂಗಳ ಆಚರಣೆಗೆ ಏಕೆ ಎಂಬ ಪ್ರಶ್ನೆ ಸಹ ಮುಂದಿಡಲಾಗಿದೆ..

ಪುಡಿ ರೌಡಿ ತಿರುಗೇಟು!
ಗಣೇಶೋತ್ಸವ ವೇಳೆ ಹಿಂದೂಗಳಿಗೆ ಯುವಕರಿಗೆ ಟಿ.ನರಸೀಪುರ ಪೊಲೀಸ್ ಇನ್‌ಪೆಕ್ಟರ್ ಬೆದರಿಕೆ ಹಾಕಿದ್ದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ್ ಸೇರಿ ಅನೇಕ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಈ ವೇಳೆ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಪ್ರತಾಪ್ ಸಿಂಹ್ ಅವರು ಹೇಳಿದ್ದರು. ಅವರ ಈ ವಿಡಿಯೋ ಹಂಚಿಕೊಂಡಿರುವ ಎಚ್,ಎಸ್. ಮಂಜುನಾಥ್ ಅವರು ತಿರುಗೇಟು ನೀಡಿದ್ದಾರೆ. ಪುಡಿ ರೌಡಿ ಅಂತಲೂ ಕರೆದಿದ್ದಾರೆ.
ಪೊಸ್ಟ್‌ನಲ್ಲಿ ಮಂಜುನಾಥ್, 'ಪೊಲೀಸ್ ಠಾಣೆಗೆ ನುಗ್ಗುತ್ತೇನೆ' ಎನ್ನುವ ಪುಡಿ ರೌಡಿ ಪ್ರತಾಪ್ ಸಿಂಹ ಅವರೇ ಕಾನೂನಿಗೆ ಗೌರವ ಕೊಡುವುದನ್ನು ಕಲಿಯಿರ. ನಿಮ್ಮ ಈ ಪುಂಡಾಟಿಕೆಯಿಂದಲೇ ಟಿಕೆಟ್ ನೀಡದೆ ನಿಮ್ಮನ್ನು ಬಿಜೆಪಿಯವರು ಬಾಗಿಲ ಹಿಂದಿನ ಕಸದ ಬುಟ್ಟಿಗೆ ಎಸೆದಿರುವುದು. ಠಾಣೆಯ ಬಾಗಿಲಲ್ಲಿ ಗದ್ದಲ ಮಾಡಿ ಶೌರ್ಯ ತೋರಿದರೆ ಬಿಜೆಪಿಯ ಟಿಕೆಟ್ ಸಿಗುವುದಿಲ್ಲ. ಯಡಿಯೂರಪ್ಪ ಅವರ ಮನೆ ಬಾಗಿಲ ಬಳಿ ಹೋಗಿ ಗದ್ದಲ ಮಾಡಿ' ಎಂದು ಲೇವಡಿ ಮಾಡಿದ್ಆರೆ.
ಅಯೋಧ್ಯೆ ಹುಂಡಿ ಹಣ ಹೊಡೆದಾಗ ಪೌರುಷ ಎಲ್ಲಿತ್ತು?
ತಮಗೆ ಏಕಾಏಕಿ ಹಿಂದೂ ದೇವರ ಮೇಲೆ ಭಕ್ತಿ ಬಂದಿದೆ. ಅಯೋಧ್ಯೆಯಲ್ಲಿ ನಿಮ್ಮ ಪಕ್ಷದವರು ಹುಂಡಿ ಲೂಟಿ ಹೊಡೆದಾಗ ನಿಮ್ಮ ಪೌರುಷ ಎಲ್ಲಿ ಅಡ ಇಟ್ಟಿದ್ದಿರಿ. ತಮ್ಮ ಪಕ್ಷದವರೇ ಹುಂಡಿ ಕಳ್ಳತನ ಮಾಡಿದ್ದನ್ನ ಖಂಡಿಸದ ಧರ್ಮ ದ್ರೋಹಿ ತಾವು. ನಿಮಗೆ ಹಿಂದೂಗಳು ಹಾಗೂ ದೇವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
'ನಮಗೆ ಹಿಂದೂ ದೇವರ ಮೇಲೆ ಭಕ್ತಿ, ಗೌರವವಿದೆ. ನಮ್ಮ ಸರ್ಕಾರ ಎಲ್ಲಾ ದೇವರುಗಳನ್ನು ಪೂಜಿಸುತ್ತದೆ, ಪೂಜಿಸುವವರಿಗೆ ಸಹಕರಿಸಿ ಸಕಲ ಸಿದ್ಧತೆ ಮಾಡುತ್ತದೆ. ಹಾಗಂತ ಪುಂಡಾಟಿಕೆ ಸಹಿಸುವುದಿಲ್ಲ. ಪೊಲೀಸರ ಬ್ಯಾರಿಕೇಡ್ ಮೇಲೆ ಕಾರು ಹರಿಸುವುದು, ಠಾಣೆಗೆ ನುಗ್ಗುತ್ತೇನೆ ಎನ್ನುವುದಲ್ಲ. ತಮ್ಮದೇ ಪಕ್ಷದೊಳಗಿನ ಹಿಂದೂ ವಿರೋಧಿ ನಿಲುವುಗಳ ಬಗ್ಗೆ ಮೊದಲು ಧ್ವನಿ ಎತ್ತಿ' ಎಂದಿದ್ದಾರೆ.
'ದೇವರು, ದೇವಸ್ಥಾನ, ವಿಭೂತಿ, ನಾಮದ ವ್ಯಂಗ್ಯವಾಡುವ ನಿಮ್ಮ ಪ್ರತಿಪಕ್ಷದ ನಾಯಕರಿಗೆ ಮೊದಲು ಮುತ್ತಿಗೆ ಹಾಕಿ. ಕೇವಲ ರಾಜಕೀಯಕ್ಕಾಗಿ ಧರ್ಮದ ದುರ್ಬಳಕೆ ಮಾಡಿಕೊಂಡರೆ ಜನರೂ ಒಪ್ಪಲ್ಲ, ಆ ದೇವರೂ ಕೂಡ ಕ್ಷಮಿಸಲ್ಲ' ಎಂದು ಹೇಳಿದ್ದಾರೆ.


Click it and Unblock the Notifications
