ಪ್ರಜ್ವಲ್ ಗೆ ಕೊನೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ದೇವೇಗೌಡರು: ಡಿ ಕೆ ಶಿವಕುಮಾರ್ ಏನಂದ್ರು?
ಬೆಂಗಳೂರು, ಮೇ 24: ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದು ವಿಶೇಷ ತನಿಖಾ ತಂಡದ ಎದುರು ಹಾಜರಾಗುವಂತೆ ಸಂಸದ ಪ್ರಜ್ವಲ್ ಗೆ ಹೆಚ್.ಡಿ.ದೇವೇಗೌಡರು ತಾಕೀತು ಮಾಡಿದ್ದಾರೆ. ಈ ಕುರಿತು ಇದು ಅವರ ಕುಟುಂಬದ ವಿಚಾರ. ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಡಿಕೆ ಶಿವಕುಮಾರ್ ಮಾತನಾಡಿ, ಬಂಡವಾಳ ಹೂಡಿಕೆ ವಿಚಾರವಾಗಿ ರಾಜ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಚುನಾವಣೆ ಮುಗಿದ ಬಳಿಕ ಅವರಿಗೆ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿ, ಈ ರೀತಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಅವರು ದಾಖಲೆಗಳನ್ನು ಪರಿಶೀಲಿಸಿ ಮಾತನಾಡಬೇಕು. ಬಿಜೆಪಿಯ ದುರಾಡಳಿತ, ಕಿರುಕುಳಕ್ಕೆ ಬೇಸತ್ತು ಲಕ್ಷಾಂತರ ಉದ್ದಿಮೆದಾರರು, ವ್ಯಾಪಾರಿಗಳು ದೇಶ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಂಡವಾಳ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ.
ನಮ್ಮ ಕೈಗಾರಿಕಾ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಈ ವಿಚಾರವಾಗಿ ದಾಖಲೆ ಸಮೇತ ಬಿಜೆಪಿ ನಾಯಕರಿಗೆ ಉತ್ತರ ನೀಡುತ್ತೇವೆ. ಕರ್ನಾಟಕ ಪ್ರಗತಿ, ಅಭಿವೃದ್ಧಿ ಹಾಗೂ ಶಾಂತಿಯ ನಾಡು ಎಂದು ಇಡೀ ದೇಶಕ್ಕೇ ಗೊತ್ತಿದೆ. ನಮ್ಮ ರಾಜ್ಯ ಹಾಗೂ ಬೆಂಗಳೂರನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದರು.
ಸಿಎಂ ಹಾಗೂ ಡಿಸಿಎಂ ನಗರ ಪ್ರದಕ್ಷಿಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟೀಕೆ ಬಗ್ಗೆ ಮಾತನಾಡಿ, ಅವರು ಏನಾದರೂ ಟೀಕೆ ಮಾಡಲಿ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ನಾವು ಜನರಿಗಾಗಿ ಇದ್ದೇವೆ. ಜನ ನಮ್ಮ ಪರವಾಗಿ ಇರುತ್ತಾರೆ ಎಂದು ತಿಳಿಸಿದರು.
ದೇವೇಗೌಡರ ಪತ್ರದಲ್ಲಿ ಏನಿದೆ?
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದು ವಿಶೇಷ ತನಿಖಾ ತಂಡದ ಎದುರು ಹಾಜರಾಗುವಂತೆ ಸಂಸದ ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ತಾಕೀತು ಮಾಡಿದ್ದಾರೆ. ನನ್ನ ಮೇಲೆ ಗೌರವ ಇದ್ದರೆ ತಕ್ಷಣವೇ ವಾಪಸ್ ಮರಳಿ ಬಾ ಎಂದು ಪ್ರಜ್ವಲ್ ಗೆ ತಾಕೀತು ಮಾಡಿದ್ದಾರಲ್ಲದೆ, ಪ್ರಜ್ವಲ್ ರೇವಣ್ಣನಿಗೆ ನನ್ನ ಎಚ್ಚರಿಕೆ ಎಂದು ತಿಳಿಸಿದ್ದಾರೆ.
ನಾನು ಮೇ 18ನೇ ತಾರೀಖಿನಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ದಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ, ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಕರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದಾರೆ.
ಈ ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಪ್ರಕರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications