ಸಿಎಂ ಬದಲಾವಣೆ: ರಾಹುಲ್ ಗಾಂಧಿ ಜೊತೆ ಸಿದ್ದು- ಡಿಕೆಶಿ 5 ನಿಮಿಷ ಮಾತುಕತೆ: ಚರ್ಚೆಯಾಗಿದ್ದೇನು?
ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆಯಂತೆ ಒಗ್ಗಟ್ಟಿನ ಮಂತ್ರ ಜಪಿಸಿರುವ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಕುರ್ಚಿ ಕಾಳಗ ನಡೆಯುತ್ತಲೇ ಇದ್ದು, ಸದ್ಯ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಮುನ್ನಲೆಗೆ ಬಂದಿದೆ.
ಹೌದು, ಹೈಕಮಾಂಡ್ ಸೂಚನೆಯಂತೆ ಇಷ್ಟು ದಿನ ತಣ್ಣಗಿದ್ದ ಪವರ್ ಶೇರಿಂಗ್ ವಿಚಾರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹೊತ್ತಲ್ಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ನಾಯಕರನ್ನ ಭೇಟಿಯಾಗಿದ್ದಾರೆ. ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭೇಟಿಯಾಗಿ 5 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ಮೊದಲಿನಿಂದಲೂ ಅಧಿಕಾರ ಹಂಚಿಕೆ ಸೂತ್ರದ ಕುರಿತು ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಸಿಎಂ ಕುರ್ಚಿ ಕಾದಾಟ ಚರ್ಚೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಮೈಸೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿಯನ್ನ ಬರಮಾಡಿಕೊಂಡ ಉಭಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಯನ್ನ ಹೂಗುಚ್ಛ ನೀಡಿ ಸನ್ಮಾನಿಸಿದರು. ಬಳಿಕ ಸುಮಾರು 5 ನಿಮಿಷಗಳ ಕಾಲ ಪ್ರತ್ಯೇಕವಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ರಾಹುಲ್ ಗಾಂಧಿ ಜತೆ ಚರ್ಚೆ ಬಗ್ಗೆ ಸಿಎಂ ಹೇಳಿದ್ದೇನು?
ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಹುಲ್ ಗಾಂಧಿಯವರು ಗೂಡ್ಲೂರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದು ಮಾರ್ಗ ಮಧ್ಯೆ ಭೇಟಿ ಮಾಡಲಾಗಿದೆ. ಸಂಜೆ ದೆಹಲಿಗೆ ತೆರಳುವಾಗಲೂ ಬೀಳ್ಕೊಡಲಾಗುವುದು ಎಂದರು. ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಗೊಂದಲಗಳಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದರು.
ಪಕ್ಷದ ಶಾಸಕರೇ ಈ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಶಾಸಕರಿಗೆ ಈ ಕುರಿತು ತಿಳಿದಿರುವುದಿಲ್ಲ. ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಬೇಕು ಎಂದರು. ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು ಎಂದರು. ಶಾಸಕರಿಗಿಂತ ಹೆಚ್ಚಾಗಿ ಮಾಧ್ಯಮಗಳೇ ಈ ಕುರಿತು ಹೆಚ್ಚು ಮಾತನಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಬಿಜೆಪಿ ಜೆಡಿಎಸ್ ನಿಂದ ಪಾಲಿಕೆ ಚುನಾವಣೆಗಳಲ್ಲಿ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನಿಗೆ ಉತ್ತರಿಸಿದರು. ಮುಖ್ಯಮಂತ್ರಿಯಾಗಿ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಅವರು ರಾಜ ರಾಜಕಾರಣಕ್ಕೆ ಮರಳುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈಗ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು , ಕ್ರಿಯಾಶೀಲರಾಗಿದ್ದಾರೆ. ಅವರ ವರ್ತನೆ, ಹಾವಭಾವ ಇವುಗಳನ್ನು ಮಾಧ್ಯಮಗಳೇ ಗಮನಿಸಬೇಕು ನಾವು ಗಮನಿಸುವುದಿಲ್ಲ ಎಂದರು.












Click it and Unblock the Notifications