ಖಾತೆ ಕಸರತ್ತು: ಪ್ರಬಲ ಖಾತೆಗಳಿಗೆ ಪಟ್ಟು ಹಿಡಿದ ಸಚಿವರು; ಹೈಕಮಾಂಡ್ ತೀರ್ಮಾನದತ್ತ ಎಲ್ಲರ ಕಣ್ಣು!
ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಸಚಿವರಿಗೆ ಖಾತೆ ಹಂಚಿಕೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ನೂತನ ಸಚಿವರು ಹಾಗೂ ಹಾಲಿ ಸಚಿವರ ನಡುವೆ ಪ್ರಮುಖ ಖಾತೆಗಳಿಗಾಗಿ ಪೈಪೋಟಿ ಆರಂಭವಾಗಿದೆ.
ಸಚಿವ ಸಂಪುಟಕ್ಕೆ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ಇದೀಗ ಅವರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಚರ್ಚೆಗಳು ನಡೆಯುತ್ತಿವೆ. ಇತ್ತ ಮಹತ್ವದ ಖಾತೆಗಳಾದ ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಲೋಕೋಪಯೋಗಿ ಹಾಗೂ ಹಣಕಾಸು ಖಾತೆಗಳ ಮೇಲೆ ಹಲವು ಸಚಿವರು ಕಣ್ಣೀಟ್ಟಿದ್ದು, ಹಲವು ಹಿರಿಯ ಸಚಿವರು ಪ್ರಮುಖ ಖಾತೆಗಾಗಿ ಲಾಬಿ ನಡೆಸಿದ್ದಾರೆ.

ಹೊಸ ಸಚಿವರಲ್ಲಿ ಕೆಲವರು ಪ್ರಭಾವಿ ಖಾತೆಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದರೆ, ಹಾಲಿ ಸಚಿವರು ತಮ್ಮ ಬಳಿ ಇರುವ ಖಾತೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದೇ ವೇಳೆ, ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಅಸಮಾಧಾನ ಉಂಟಾಗದಂತೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಸಮನ್ವಯದೊಂದಿಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ನಡುವೆ ಖಾತೆಗಳನ್ನು ಪುನರ್ ಹಂಚಿಕೆ ಮಾಡಲಾಗುತ್ತಿದೆ ಎಂಬ ವಿಷಯ ಮುನ್ನೆಲೆಗೆ ಬಂದಿದ್ದು, ಹೊಸ ಸಂಪುಟ ಸದಸ್ಯರ ಜತೆ ಹಳಬರಿಗೂ ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿದಿರುವುದು ಹೊಸ ರಾಜಕೀಯ ಬೆಳವಣಿಗೆಯಾಗಿದೆ. ಇನ್ನೂ ಮೊದಲ ಬಾರಿ ಸಂಪುಟ ವಿಸ್ತರಣೆಯಾದಾಗ ಕೊಟ್ಟ ಖಾತೆಗಳ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ ರಾಮಲಿಂಗಾ ರೆಡ್ಡಿ, ಕೆ.ಎಚ್.ಮುನಿಯಪ್ಪ, ಕೃಷ್ಣ ಭೈರೇಗೌಡ ಹಾಗೂ ಹೆಚ್ಚುವರಿ ಖಾತೆ ಕೇಳಿದವರು ತಾವು ಬಯಸಿದ ಖಾತೆ ಸಿಗಲಿ ಎಂಬ ನಿರೀಕ್ಷೆ ಇಟ್ಟುಕೊಂಡಂತಿದೆ.
ಹಿರಿತನ, ಅನುಭವ, ಇಲಾಖೆ ವಿಷಯಗಳ ಮೇಲಿನ ಹಿಡಿತ ಮತ್ತಿತರ ಮಾನದಂಡ ಪಾಲಿಸಿ ಖಾತೆ ಹಂಚಬೇಕು ಎಂಬುದು ಹೈಕಮಾಂಡ್ ನಿಲುವು. ಇದಕ್ಕೆ ಸಿಎಂ ಡಿಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಹಮತ ಕೂಡ ಇದೆ. ಒಮ್ಮೆ ಖಾತೆಗಳ ಹಂಚಿಕೆ ಬಳಿಕ ಎಷ್ಟೇ ಒತ್ತಡ ಬಂದರೂ, ಯಾರಿಗೇ ಅಸಮಾಧಾನ ಆದರೂ ಯಾವುದೇ ಕಾರಣಕ್ಕೂ ಬದಲಾಯಿಸಕೂಡದು ಎಂದು ಕಾಂಗ್ರೆಸ್ ಹೈಕಮಾಂಡ್ ಖಡಕ್ ಆಗಿ ಸೂಚನೆ ನೀಡಿದೆ.
ಇನ್ನೂ ಶಿವಲಿಂಗೇಗೌಡ ಅವರು ನಾನು ರೈತನ ಮಗ. ಎರಡೂವರೆ ಗಂಟೆ ನಿರರ್ಗಳವಾಗಿ ಮಾತನಾಡಬಲ್ಲೆ ಎಂದು ತಮ್ಮ ಅರ್ಹತೆ ಮಂಡಿಸಿ ಕೃಷಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಬಜೆಟ್ ಮೇಲೂ ನನಗೆ ಹಿಡಿತವಿದೆ. ಹಣಕಾಸು ಖಾತೆ ಕೊಟ್ಟರೂ ಓಕೆ. ನೋಡೊಣ ಸಿಎಂ ಯಾವ ಖಾತೆ ಪರಿಪಾಲಿಸುತ್ತಾರೆ ಎಂದು ಹೇಳಿದ್ದಾರೆ. ಇತ್ತ ಮಾಯಕೊಂಡದ ಬಸವಂತಪ್ಪ, ಹಾವೇರಿಯ ರುದ್ರಪ್ಪ ಲಮಾಣಿ ಇಬ್ಬರೂ, ಸಮಾಜಕಲ್ಯಾಣ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ. ಚೆಲುವರಾಯ ಸ್ವಾಮಿ, ಮಧು ಬಂಗಾರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಸಂತೋಷ್ ಲಾಡ್. ಶಿವರಾಜ್ ತಂಗಡಗಿ ಇತರರಿಗೆ ಈ ಹಿಂದಿನ ಖಾತೆಗಳನ್ನೇ ನೀಡಲಾಗುತ್ತದೆ
ಮಹಿಳಾ ನಾಯಕಿಯರ ನಡುವೆ ತೀವ್ರ ಪೈಪೋಟಿ
ಕಾಂಗ್ರೆಸ್ ಸರ್ಕಾರದಲ್ಲಿ 19 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಖಾಲಿ ಉಳಿದಿರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ನಾಯಕಿಯರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಹೈಕಮಾಂಡ್‌ನ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿತ್ತು. ಇದೀಗ ಉಳಿದಿರುವ ಒಂದು ಸಚಿವ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಹೆಚ್ಚಾಗಿದೆ.
ಈ ಸ್ಥಾನಕ್ಕಾಗಿ ಕನಿಷ್ಠ ಐವರು ಮಹಿಳಾ ನಾಯಕಿಯರು ಆಕಾಂಕ್ಷಿಗಳಾಗಿದ್ದು, ತಮ್ಮದೇ ಆದ ಕಾರಣಗಳನ್ನು ಮುಂದಿಟ್ಟಿದ್ದಾರೆ. ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ, ಎಂಎಲ್ಸಿ ಉಮಾಶ್ರೀ ಅವರ ಹೆಸರೂ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.
ಇದಲ್ಲದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣಾ ತುಕಾರಾಂ ಅವರ ಹೆಸರುಗಳೂ ಸಚಿವ ಸ್ಥಾನದ ರೇಸ್‌ನಲ್ಲಿ ಕೇಳಿಬರುತ್ತಿವೆ. ಅನ್ನಪೂರ್ಣಾ ತುಕಾರಾಂ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ಖಾಲಿ ಇರುವ ಒಂದೇ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ನಾಯಕಿಯರ ನಡುವೆ ಪೈಪೋಟಿ ಜೋರಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಅವಕಾಶ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications
