ಆಂಬಿಡೆಂಟ್ ವಂಚನೆ ಪ್ರಕರಣ : ಜನಾರ್ದನ ರೆಡ್ಡಿಗೆ ತಾತ್ಕಾಲಿಕ ನೆಮ್ಮದಿ
ಬೆಂಗಳೂರು, ಡಿಸೆಂಬರ್ 04 : ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಪ್ರಕರಣದಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳದಂತೆ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಸ್ತರಣೆ ಮಾಡಿದೆ.
ತಮ್ಮ ವಿರುದ್ಧದ ಆಂಬಿಡೆಂಟ್ ವಂಚನೆ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಜನಾರ್ದನ ರೆಡ್ಡಿ ಮತ್ತು ಅಲಿಖಾನ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ವಿಚಾರಣೆಯನ್ನು ಮುಂದುವರೆಸಿದ ಕೋರ್ಟ್ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿತು.
ದೂರುದಾರರಿಗೆ ನೋಟಿಸ್ ತಲುಪುವ ತನಕ ಜನಾರ್ದನ ರೆಡ್ಡಿ ಅವರ ವಿರುದ್ಧ ಬಲವಂತವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್ ಹಿಂದೆ ಮಧ್ಯಂತರ ಆದೇಶ ನೀಡಿತ್ತು. ಮಂಗಳವಾರ ಆದೇಶವನ್ನು ವಿಸ್ತರಣೆ ಮಾಡಿ, ವಿಚಾರಣೆಯನ್ನು ಮುಂದೂಡಿತು.

ಜನಾರ್ದನ ರೆಡ್ಡಿ ಅವರು ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ. ಸಿಸಿಬಿ ಪೊಲೀಸರು ವಂಚನೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ರೆಡ್ಡಿ ಆಪ್ತರಾದ ಅಲಿಖಾನ್ ಅವರು ಸಹ ಈ ಪ್ರಕರಣದಲ್ಲಿ ಆರೋಪಿ.
ಜನಾರ್ದನ ರೆಡ್ಡಿ ಅವರ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು. ಮುಂದಿನ ಆದೇಶದ ತನಕ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ.












Click it and Unblock the Notifications