B.S.Yediyurappa: ಪೋಕ್ಸೊ ಪ್ರಕರಣ; ಮಾಜಿ ಸಿಎಂ ಬಿಎಸ್‌ವೈಗೆ ಸಮನ್ಸ್ ಕೊಟ್ಟ ಕೋರ್ಟ್
ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಪೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಮಾರ್ಚ್ 15ರಂದು ವಿಚಾರಣೆ ನಡೆಯಿಲಿದ್ದು ಈಗ ಕೋರ್ಟ್ ಸೂಚನೆಯಂತೆ ಅವರು ವಿಚಾರಣೆಗೆ ಹಾಜರಾಗಬೇಕಿದೆ.
ಬೆಂಗಳೂರು ನಗರದ ಒಂದನೇ ಪೋಕ್ಸೋ ವಿಶೇಷ ನ್ಯಾಯಾಲಯವು ಬಿಎಸ್ ಯಡಿಯೂರಪ್ಪ ಸೇರಿದಂತೆ ನಾಲ್ವರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಯಡಿಯೂರಪ್ಪ ಅವರು ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಹೈಕೋರ್ಟ್ ನೀಡಿದ ಆದೇಶಗಳನ್ನು ಪರಿಶೀಲನೆ ಮಾಡಿದೆ.

ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಫೆಬ್ರವರಿ 2, 2024 ರಂದು ದೂರುದಾರ ಮಹಿಳೆಯ 17 ವರ್ಷದ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗಿದೆ. ದೂರುದಾರರು ಮತ್ತು ಅವರ ಮಗಳು ಬೇರೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಾಯ ಕೇಳಲು ಹೋದಾಗ ಬಿಎಸ್‌ವೈ ಅವರ ಮನೆಯಲ್ಲೇ ಈ ಘಟನೆ ನಡೆದಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಐಪಿಸಿ ಸೆಕ್ಷನ್ 354ಎ, 204, 214 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು. ಬಿಎಸ್‌ವೈ ವಿರುದ್ಧ ದೂರು ಕೊಟ್ಟಿದ್ದ ಮಹಿಳೆ ಮೇ 26, 2024 ರಂದು ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದರು.
ಏನಿದು ಪ್ರಕಾರಣ?
ಫೆಬ್ರವರಿ 2, 2024ರಂದು ಸಹಾಯ ಕೇಳಿಕೊಂಡು ಮನೆಗೆ ಹೋಗಿದ್ದ ನನ್ನ 17 ವರ್ಷದ ಮಗಳಿಗೆ ಬಿ.ಎಸ್ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 2024ರ ಮಾರ್ಚ್ 14ರಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಹಿಳೆ ನೀಡಿದ ದೂರಿನ ಮೇರೆಗೆ ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಬಿಎಸ್‌ವೈ ಮಾತ್ರವಲ್ಲದೆ ಅವರ ಆಪ್ತರಾದ ರುದ್ರೇಶ್, ಮರಿಸ್ವಾಮಿ ಮತ್ತು ವೈಎಂ ಅರುಣ್ ಎನ್ನುವವರ ಮೇಲೆ ಸಾಕ್ಷಿನಾಶ ಹಾಗೂ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಸಿಐಡಿ ಅಧಿಕಾರಿಗಳು ಈ ಪ್ರಕರಣದ ವಿಚಾರಣೆ ನಡೆಸಿದ್ದು ಯಡಿಯೂರಪ್ಪ ಹಾಗೂ ಉಳಿದ ಮೂವರು ಆರೋಪಿಗಳ ವಿರುದ್ಧ ಪೋಕ್ಸೋ ಹಾಗೂ ಸಾಕ್ಷ್ಯ ನಾಶಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.












Click it and Unblock the Notifications