ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
Sri mallikarjun Mutya: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಠ ಸ್ಥಾಪಿಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದಾರೆ. ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ಪಕ್ಕದ ತೆಲಂಗಾಣದ ಕೆಲ ಜಿಲ್ಲೆಗಳಲ್ಲೂ ಅವರು ಸ್ವಯಂಘೋಷಿತ ದೇವಮಾನವನಾಗಿ ಹೆಸರು ಪಡೆದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರ ಅನೇಕ ವಿಡಿಯೋಗಳು ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.
ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ
ಆದರೆ, ಇತ್ತೀಚೆಗೆ ಹರಿದಾಡುತ್ತಿರುವ ಒಂದು ವಿಡಿಯೋ ಅವರ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯೊಂದಿಗೆ ಅನುಚಿತ ವರ್ತನೆ ನಡೆಸಿದಂತೆ ಕಾಣಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ಗಂಭೀರ ರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.

ಮಕ್ಕಳ ಹಕ್ಕುಗಳ ಆಯೋಗದ ಸೂಚನೆಯಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳ ಪರಿಶೀಲನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ಕಾಣೆ ಆಗಿರುವುದಾಗಿ ತಿಳಿದುಬಂದಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ವೇಳೆ, ಮಠದತ್ತ ಭಕ್ತರು ಸೇರುತ್ತಿರುವ ಮಾಹಿತಿ ಲಭ್ಯವಾಗಿದ್ದು, ಮುತ್ಯಾ ಪರವಾಗಿ ಕೆಲವರು ಬೆಂಬಲ ವ್ಯಕ್ತಪಡಿಸುತ್ತಿರುವುದು ಗಮನಾರ್ಹವಾಗಿದೆ.
ಅಜ್ಞಾತ ಸ್ಥಳದಿಂದ ಮುತ್ಯಾ ವಿಡಿಯೋ
ಇದರ ಮಧ್ಯೆಯೇ ಅಜ್ಞಾತ ಸ್ಥಳದಿಂದ ಮುತ್ಯಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ತಾವು ಎಲ್ಲಿದ್ದೇವೆ ಎಂಬುದನ್ನೂ ಆ ವಿಡಿಯೋದಲ್ಲಿ ತಿಳಿಸಿದ್ದು, ಪೊಲೀಸರು ಯಾವಾಗ ಬರುವುದಕ್ಕೆ ಹೇಳುತ್ತಾರೆಯೋ ಆಗ ನಾನು ಬಂದು ತನಿಖೆಗೆ ಸಹಕರಿಸುತ್ತೇನೆ ಅಂತಲೂ ಹೇಳಿದ್ದಾರೆ.












Click it and Unblock the Notifications