Jog Falls: ಭೊರ್ಗರೆಯುತ್ತಿದೆ ಜೋಗ; ಪಾರ್ಕಿಂಗ್ ಸಮಸ್ಯೆಯಿಂದ ಪ್ರವಾಸಿಗರು ಹೈರಾಣು
ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಜಿಲ್ಲೆಯಲ್ಲಿರುವ ಅನೇಕ ಜಲಪಾತಗಳು ಗತವೈಭವ ಮರಳಿ ಪಡೆದುಕೊಂಡಿದ್ದು, ಪ್ರಸಿದ್ಧವಾದ ಜೋಗ ಜಲಪಾತ ಕೂಡ ಭೋರ್ಗರೆಯುತ್ತಿದೆ.
ಜೋಗ ಮೈದುಂಬಿಕೊಂಡ ನಂತರ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು ಸಮಸ್ಯೆ ಶುರುವಾಗಿದೆ. ಜೋಗ ಜಲಪಾತದ ಬಳಿ ಹಲವು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಪಾರ್ಕಿಂಗ್ ಸಮಸ್ಯೆಯಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.

ಜೋಗದ ಬಳಿ 183 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಜೋಗ ನಿರ್ವಹಣಾ ಪ್ರಾಧಿಕಾರವು ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದಕ್ಕೆ ಅನುಗುಣವಾಗಿ ಸವಾಲುಗಳನ್ನು ಎದುರಿಸುತ್ತಿದೆ.
ಶನಿವಾರ ಒಂದೇ ದಿನ ಜೋಗವನ್ನು ನೋಡಲು ಸುಮಾರು 3000 ಪ್ರವಾಸಿಗರು ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಲಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
#Shivamogga #jogfalls #Monsoon2024 pic.twitter.com/p6LLJ1BgwK
— kuntavalliguru (@kuntavalliguru) July 6, 2024
ಕಾಮಗಾರಿ ಮುಗಿಯಲು ಇನ್ನೂ ಒಂದು ವರ್ಷ
ಪ್ರಾಧಿಕಾರದ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರದ ಅನುದಾನದ ಕಾಮಗಾರಿಗಳು ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಕಳೆದ ವಾರದಿಂದ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚಿತ್ತಿದೆ ಎಂದಿದ್ದಾರೆ.
ಶಿವಮೊಗ್ಗದ ಇತರ ಪ್ರವಾಸಿ ಆಕರ್ಷಣೆಗಳಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ, ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಬೆಂಗಳೂರಿನಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶಿವಮೊಗ್ಗ ಮೃಗಾಲಯ ಪ್ರಾಧಿಕಾರವು ಸಿಬ್ಬಂದಿಗೆ ವಾರದ ರಜೆಯನ್ನು ರದ್ದುಗೊಳಿಸಿದೆ ಮತ್ತು ಹೆಚ್ಚಿದ ಜನಸಂದಣಿಯನ್ನು ಪೂರೈಸಲು ಸಂರಕ್ಷಣಾ ಕೇಂದ್ರವನ್ನು ವಾರದಲ್ಲಿ ಏಳು ದಿನ ತೆರೆದಿದೆ.












Click it and Unblock the Notifications