ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ -90; ವಿಶ್ವನಮನ ಸಮಾರೋಪ ಉದ್ಘಾಟನೆ "ಸಂಸ್ಕೃತಿ ಸಂಪನ್ನತೆಗೆ ಹೊಸ ತಲೆಮಾರಿಗೆ ಆದ್ಯತೆ"
ಬೆಂಗಳೂರು: 'ದೇಶದ ಸಂಸ್ಕೃತಿ ಸಂಪನ್ನವಾಗಿ ಬೆಳೆಯಲು ಹೊಸ ತಲೆಮಾರಿನ ಯುವಶಕ್ತಿಯತ್ತ ನಮ್ಮ ಗಮನ ಕೊಡಬೇಕು ಎಂಬುದು ಬನ್ನಂಜೆಯವರ ಆಶಯವಾಗಿತ್ತು' ಎಂದು ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು,
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಶ್ರಯದಲ್ಲಿ, ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮದಿನದ ಪ್ರಯುಕ್ತ ವಿವಿಧೆಡೆ ಹಮ್ಮಿಕೊಂಡಿದ್ದ ವಿಶ್ವನಮನ ಕಾರ್ಯಕ್ರಮದ ಸಮಾರೋಪವನ್ನು ನಗರದ ಗಾಯನ ಸಮಾಜದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. "ಮುಂದಿನ ತಲೆಮಾರಿನಲ್ಲಿ ಸಂಸ್ಕೃತಿಯು ಅದ್ಭುತವಾಗಿ ಬೆಳೆಯುವ ಬಗ್ಗೆ ಬನ್ನಂಜೆ ಅವರು ಆಶಾವಾದಿಯಾಗಿದ್ದರು. ತಲೆಮಾರುಗಳ ನಡುವಿನ ಅಂತರ ಮತ್ತು ಅಭಿಪ್ರಾಯ ಬೇಧ ಇರುವುದು ಸಹಜ. ಆದರೆ, ಪ್ರತಿಯೊಬ್ಬರ ಅಭಿಪ್ರಾಯವೂ ಗೌರವಾರ್ಹವೇ. ಮಠ, ಮಡಿಗಳ ಆಚೆಗೂ ನಮ್ಮ ಚಿಂತನೆಗಳಿರಬೇಕು ಎಂಬುದನ್ನು ಬನ್ನಂಜೆಯವರು ಪ್ರತಿಪಾದಿಸಿದ್ದರು" ಎಂದರು.

ಹರಿಹರಪುರ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ʼಭಾರತೀಯ ಸಂಸ್ಕೃತಿ ಏಕತ್ವವನ್ನು ಎತ್ತಿ ಹಿಡಿಯುತ್ತಲೇ ಬಹುತ್ವವನ್ನು ಒಪ್ಪಿಕೊಂಡಿದೆ. ಇಲ್ಲಿ ವೈಚಾರಿಕತೆಯಿದೆ. ಬನ್ನಂಜೆಯವರು ವೈಚಾರಿಕತೆಗೆ ನಿಖರ ದೃಷ್ಟಿಕೋನ ಮತ್ತು ಸತ್ಯಶೋಧನೆ ಮಾಡುತ್ತಲೇ ಬಂದರು. ಕನ್ನಡ, ಸಂಸ್ಕೃತ ಸಾಹಿತ್ಯದಲ್ಲಿ ವಿಶಿಷ್ಟ ಛಾಪು ಮೂಡಿಸಿ ಕೋಟ್ಯಂತರ ಶಿಷ್ಯರ ಹೃದಯದಲ್ಲಿ ನೆಲೆಯಾಗಿದ್ದಾರೆʼ ಎಂದು ನುಡಿದರು.
ವಿಶ್ವನಮನ - ಜ್ಞಾನಾಶ್ವಮೇಧ
ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ʼಬನ್ನಂಜೆಯವರ ಪ್ರಕಾರ ಎಲ್ಲೆಡೆ ಒಳ್ಳೆಯ ಜಿಜ್ಞಾಸುಗಳಿದ್ದರೆ ಎಲ್ಲಿಯೂ ಅಶಾಂತಿ ಸಾಧ್ಯವಿಲ್ಲ. ಸತ್ಯಶೋಧಕ ಜಿಜ್ಞಾಸುಗಳ ಪಂಥ ಇಂದು ಬೇಕಿದೆ. ವಿಶ್ವನಮನದ ಹೆಸರಿನಲ್ಲಿ ಇಂದು ಜ್ಞಾನಾಶ್ವಮೇಧ ನಡೆದಿದೆ. ನಿತ್ಯ, ಜ್ಞಾನದ ದೀಪಸ್ತಂಭವಾಗಿರುವ ಬನ್ನಂಜೆ ಅಜರಾಮರರಾಗಿದ್ದಾರೆ ಎಂದು ಬಣ್ಣಿಸಿದರು.
ಬನ್ನಂಜೆ ಜೈತ್ರಯಾತ್ರೆ
ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ʼಬನ್ನಂಜೆಯವರದ್ದು ವಸ್ತುನಿಷ್ಠ ದೃಷ್ಟಿ. ಅಪರೂಪದ ಚಿಂತನೆ. ಇನ್ನೊಬ್ಬರ ಅನುಭವಗಳನ್ನು ತಮ್ಮ ಅನುಭವ ಮಾಡಿಕೊಂಡರೆ ಹೆಚ್ಚು ಕಾಲ ಬಾಳಬಹುದು ಎಂಬುದು ಅವರ ಚಿಂತನೆಯೂ ಆಗಿತ್ತು. ಈ ನಿಟ್ಟಿನಲ್ಲಿ ವಿಶ್ವನಮನ ಕಾರ್ಯಕ್ರಮ ಬನ್ನಂಜೆಯವರ ಜೈತ್ರಯಾತ್ರೆ. ತರಳಬಾಳು ಹುಣ್ಣಿಮೆ ಸಹಿತ ಅನೇಕ ಕಾರ್ಯಕ್ರಮಗಳಲ್ಲಿ ಬನ್ನಂಜೆಯವರು ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆʼ ಎಂದರು.
ಚಿತ್ರನಟಿ ವಿನಯಾಪ್ರಸಾದ್ ಮಾತನಾಡಿ, ʼನನ್ನ ವೃತ್ತಿ ಜೀವನ ಆರಂಭವಾದದ್ದೇ ಬನ್ನಂಜೆ ಅವರು ಬರೆದ ಕಥಾ ಹಂದರದ, ಜಿ.ವಿ. ಅಯ್ಯರ್ ನಿರ್ದೇಶನದ ಮಧ್ವಾಚಾರ್ಯ ಚಿತ್ರದಿಂದ. ಬಾಲ್ಯದಲ್ಲಿ ಅವರ ಪ್ರವಚನ ಕೇಳಲು ಉಡುಪಿಯ ಕೃಷ್ಣಮಠದ ಅಂಗಣಕ್ಕೆ ಓಡುತ್ತಿದ್ದೆವು. ಅವರ ಬರಹ, ಮಾತುಗಳನ್ನು ಉಲ್ಲೇಖಿಸಿ ನಾನು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದೆ. ದ.ರಾ.ಬೇಂದ್ರೆ ಅವರ ನಾಕು ತಂತಿ ಕೃತಿಗೆ ಬನ್ನಂಜೆ ಅವರು ಭಾಷ್ಯ ಬರೆದಿದ್ದರು. ಹೀಗೆ ನಾಕು ತಂತಿಗೆ ಹೊಸ ತಂತಿಯ ನಾದ ನೀಡಿದ್ದರುʼ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸೋಸಲೆಯ ವ್ಯಾಸರಾಜ ಮಠದ ವಿದ್ಯಾಶ್ರೀಶ ಸ್ವಾಮೀಜಿ ಮಾತನಾಡಿ, ʼ ಲೋಕದ ತಂತ್ರವನ್ನು ನೋಡುತ್ತಲೇ ಕೆಲವೊಮ್ಮೆ ವಿರಕ್ತಿ ಮೂಡುವುದು ಸಹಜ. ಬದುಕಿನಲ್ಲಿ ವಿರಕ್ತಿಯ ನಡುವೆಯೂ ಲೌಕಿಕದ ಆಸಕ್ತಿಯನ್ನು ಉಳಿಸಿಕೊಂಡೇ ಬಾಳಬೇಕು ಎಂಬುದನ್ನು ಬನ್ನಂಜೆಯವರು ಪ್ರತಿಪಾದಿಸಿದ್ದರು.. ಬನ್ನಂಜೆಯವರ ತಂದೆ ಪಡುಮುನ್ನೂರು ನಾರಾಯಣಾಚಾರ್ಯರ ಜೊತೆ ಸೇರಿ ತರ್ಕಶಾಸ್ತ್ರ ಸಂಬಂಧಿಸಿದ ಗ್ರಂಥವೊಂದನ್ನು ಸಂಪಾದಿಸುವ ಅವಕಾಶವೂ ಸಿಕ್ಕಿತ್ತು. ಹೀಗೆ ಅವರ ವಿದ್ಯಾಋಣ ನಮ್ಮೊಂದಿಗಿದೆʼ ಎಂದು ಸ್ಮರಿಸಿದರು.
ಬನ್ನಂಜೆ ಅವರು ವಿದ್ವಾಂಸ ಎಡ್ವಿನ್ ಜೆರೊ ಅವರಿಗೆ ಬೋಧಿಸಿದ ಸಂಸ್ಕೃತ ಪಾಠ ಸರಣಿಯ ಅಕ್ಷರರೂಪ ʼಭೇದೋಜ್ಜೀವನಂʼಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಶುಂಠಿ ಸತ್ಯನಾರಾಯಣ ಭಟ್ ಸಾಗರ, ಬನ್ನಂಜೆಯವರ ಒಡನಾಡಿ ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರೊ.ಪಿ.ಆರ್. ಮುಕುಂದ, ಪ್ರವಚನಕಾರ ವಿದ್ವಾನ್ ಬ್ರಹ್ಮಣ್ಯಾಚಾರ್, ಸಂಗೀತ ವಿದ್ವಾನ್ ವಿದ್ಯಾಭೂಷಣ, ಪ್ರತಿಷ್ಠಾನದ ಚೀಫ್ ಟ್ರಸ್ಟಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.


Click it and Unblock the Notifications
