ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇನ್ನುಮುಂದೆ ಹೊರಗಿನ ಊಟ ನಿಷೇಧ
ಬೆಂಗಳೂರು, ಏಪ್ರಿಲ್ 11: ಇನ್ನುಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗಿನಿಂದ ಯಾರೂ ಊಟ ತಂದುಕೊಡುವಂತಿಲ್ಲ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದು, ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಕಾಯ್ದೆ ಅನ್ವಯ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ
ಆಸ್ಪತ್ರೆಗೆ ದಾಖಲಾದ ರೋಗಿಗಳು ಆಸ್ಪತ್ರೆಯಲ್ಲಿ ನೀಡುವ ಆಹಾರವನ್ನು ಸೇವಿಸಬೇಕು. ವೈದ್ಯರು ರೋಗಿಗಳು ಗುಣಮುಖರಾಗಲಿ ಎಂದೇ ಆಸ್ಪತ್ರೆಯ ಆಹಾರ ಸೇವಿಸಲು ಸೂಚಿಸಿರುತ್ತಾರೆ.
ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಶಿಶು ಸುರಕ್ಷಾ ಯೋಜನೆಯಡಿ ಆಹಾರ ಒದಗಿಸಲಾಗುತ್ತಿದೆ. ನಗರದ ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗಳು ಸೇರಿ ಹಲವೆಡೆ ರೋಗಿಗಳು ಹೊರಗಿನ ಊಟ ಸೇವಿಸುತ್ತಿದ್ದಾರೆ.
ಹೀಗಾಗಿ ಆರೋಗ್ಯ ಇಲಾಖೆಯು ಆಸ್ಪತ್ರೆಗಳಲ್ಲಿ ಹೊರಗಿನಿಂದ ತರುವ ಆಹಾರಕ್ಕೆ ತಡೆ ನೀಡಿದೆ. ಹೊರಗಿನ ಊಟ ಸೇವಿಸುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುವ ಸಾಧ್ಯತೆ ಇದೆ. ರೋಗ ಬೇಗ ಗುಣಮುಖವಾಗದೆಯೂ ಇರಬಹುದು ಎಂದು ಹೇಳಿದ್ದಾರೆ.
ಅಲ್ಲದೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಎಚ್ಚರ ವಹಿಸುವಂತೆಯೂ ಸೂಚಿಸಲಾಗಿದೆ. ಆಹಾರ ತಜ್ಞರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ಸೂಚನೆಯಂತೆ ಊಟ ನೀಡಬೇಕೆಂದು ಆದೇಶಿಸಲಾಗಿದೆ.