ಕರ್ನಾಟಕ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ₹8,400 ಕೋಟಿ ಹೂಡಿಕೆ ಒಪ್ಪಿದ NXP: ಕೈಗಾರಿಕೆ ಸಚಿವ
ಹೇಗ್ (ನೆದರ್‌ಲ್ಯಾಂಡ್ಸ್), ಡಿಸೆಂಬರ್ 04: ಕರ್ನಾಟಕದ ಸೆಮಿಕಂಡಕ್ಟರ್ ವಲಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 8,400 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಸೆಮಿಕಂಡಕ್ಟರ್ ತಯಾರಿಸುವ ಜಾಗತಿಕ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ನೆದರ್‌ಲ್ಯಾಂಡ್ಸ್‌ನ NXP ದೃಢಪಡಿಸಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ಮಾಹಿತಿ ನೀಡಿದರು.
ಮುಂದಿನ ವರ್ಷ 2025ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆ ಆಕರ್ಷಿಸಲು ಸಚಿವರ ನೇತೃತ್ವದ ನಿಯೋಗ ಯುರೋಪ್ ಪ್ರವಾಸ ಕೈಗೊಂಡಿದೆ. ನೆದರ್‌ಲ್ಯಾಂಡ್ಸ್ ಹೇಗ್ ಪಟ್ಟಣದಲ್ಲಿ ಇಂದು ಸಚಿವರ ನೇತೃತ್ವದ ಉನ್ನತ ಮಟ್ಟದ ನಿಯೋಗದ ಅಲ್ಲಿನ ಎನ್‌ಎಕ್ಸ್‌ಪಿ ಮುಖ್ಯಸ್ಥರ ಜೊತೆಗೆ ಸಮಾಲೋಚನೆ ನಡೆಸಿತು. ಬಂಡವಾಳ ಹೂಡಿಕೆ ಕುರಿತು ಚರ್ಚಿಸಿತು.

ರಾಜ್ಯದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಅಭಿವೃದ್ಧಿಗೆ (ಆರ್‌ಆ್ಯಂಡ್‌ಡಿ) ಕಂಪನಿಯು ಬೆಂಗಳೂರಿನಲ್ಲಿ ₹8,400 ಕೋಟಿ ಹೂಡಿಕೆ ಮಾಡುವುದಾಗಿ ಎನ್‌ಎಕ್ಸ್‌ಪಿ-ಯ ಕಾರ್ಯನಿರ್ವಾಹಕ ನಿರ್ದೇಶಕ ಮೌರಿಸ್ ಗೆರೆಟ್ಸ್ ಅವರು ಭರವಸೆ ನೀಡಿದ್ದಾರೆ.
ನವೋದ್ಯಮ ಹಾಗೂ ಮಾನವ ಸಂಪನ್ಮೂಲದ ಕೌಶಲ ವೃದ್ಧಿ ಕ್ಷೇತ್ರದಲ್ಲಿ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೂ ಉತ್ಸುಕತೆ ತೋರಿಸಿದ್ದಾರೆ. ಜಾಗತಿಕ ವಾಣಿಜ್ಯ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ರಾಜ್ಯದ ನಿಯೋಗವು ಫಿಲಿಪ್ಸ್ ಕಂಪನಿ ಜೊತೆಗೂ ಸಮಾಲೋಚನೆ ನಡೆಸಿತು. ಬೆಂಗಳೂರಿನ ಕ್ಯಾಂಪಸ್‌ನಲ್ಲಿ 2023ರಲ್ಲಿ ₹445 ಕೋಟಿ ಹೂಡಿಕೆ ಮಾಡಿರುವ ಈ ಕಂಪನಿಯು ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮುಂದೆ ಬಂದರೆ ಅಗತ್ಯ ನೆರವು ಕಲ್ಪಿಸುವುದಾಗಿ ಸರ್ಕಾರ ಪರ ಸಚಿವರು ಭರವಸೆ ನೀಡಿದರು.
ರಾಜ್ಯದ ನಿಯೋಗವು ದೀಪ/ಬೆಳಕಿನ ಉತ್ಪನ್ನಗಳ ಜಾಗತಿಕ ಪ್ರಮುಖ ಕಂಪನಿ ಸಿಗ್ನಿಫಿ (ಈ ಹಿಂದಿನ ಫಿಲಿಪ್ಸ್ ಲೈಟಿಂಗ್) ಪ್ರಮುಖರನ್ನು ಭೇಟಿಯಾಗಿ ದೇಶಿ ಮತ್ತು ರಫ್ತು ಮಾರುಕಟ್ಟೆ ಉದ್ದೇಶಕ್ಕೆ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸುವುದರ ಪ್ರಯೋಜನ, ಹೂಡಿಕೆ ಅವಕಾಶ, ಇಲ್ಲಿನ ಸಂಪನ್ಮೂಲ ಕುರಿತು ಮಾಹಿತಿ ನೀಡಿದರು.
ಹೈನೆಕೆನ್ ಜೊತೆಗಿನ ಭೇಟಿಯಲ್ಲಿ ಕರ್ನಾಟಕದಲ್ಲಿ ತಯಾರಿಕೆಗೆ ಸಂಬಂಧಿಸಿದ ಹೂಡಿಕೆ ಮಾಡುವುದರ ಆಗು ಲಾಭ, ಬೆಳವಣಿಗೆ ಕುರಿತು ಸಭೆಗೆ ತಿಳಿಸಿದರು. ನೆದರಲ್ಯಾಂಡ್ಸ್‌ನಲ್ಲಿ ನಡೆದ ʼಇನ್ವೆಸ್ಟ್ ಕರ್ನಾಟಕʼದ ರೋಡ್‌ಷೋದಲ್ಲಿ ನಾವೀನ್ಯತೆ, ಸೆಮಿಕಂಡಕ್ಟರ್ಸ್, ನವೀಕರಿಸಬಹುದಾದ ಇಂಧನ ಮತ್ತು ತಯಾರಿಕಾ ವಲಯದಲ್ಲಿನ ಕರ್ನಾಟಕದಲ್ಲಿ ಇರುವ ಸದಾವಕಾಶಗಳನ್ನು ಸ್ಥಳೀಯ ಉದ್ಯಮಿಗಳಿಗೆ ಪರಿಚಯಿಸಲಾಯಿತು.












Click it and Unblock the Notifications