ಸೇನಾ ನೇಮಕಾತಿಗೂ ಇನ್ನೂ ಆನ್‌ಲೈನ್ ವ್ಯವಸ್ಥೆ
ಬೆಂಗಳೂರು, ಜುಲೈ 23 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಭಾರತೀಯ ಸೇನೆಯೂ ಆಳವಡಿಸಿಕೊಂಡಿದೆ. ಆದ್ದರಿಂದ, ಇನ್ನು ಮುಂದೆ ಸೇನಾ ನೇಮಕಾತಿಗಳಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮೊದಲು ಅರ್ಜಿ ಸಲ್ಲಿಸಬೇಕಾಗಿದೆ.
ಬೆಂಗಳೂರಿನ ಕಬ್ಬನ್ ರಸ್ತೆಯ ಸೇನಾ ಪಡೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಮತ್ತು ಗೋವಾ ನೇಮಕ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್ ಜನರಲ್ (ನೇಮಕ) ಬ್ರಿಗೇಡಿಯರ್ ವಿ.ರಾಜಮಣಿ ಅವರು ಈ ಕುರಿತು ಮಾಹಿತಿ ನೀಡಿದರು. [ಉದ್ಯೋಗದ ಮಾಹಿತಿ ಇಲ್ಲಿದೆ ನೋಡಿ]

ಇದುವರೆಗೆ ಸೇನಾ ನೇಮಕಾತಿಗಳನ್ನು ಬಹಿರಂಗವಾಗಿ ನಡೆಸಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಕರೆ ನೀಡಿರುವುದರಿಂದ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು. [ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 2015ರ ಅಕ್ಟೋಬರ್‌ನಲ್ಲಿ ಹಾವೇರಿಯಲ್ಲಿ ನಡೆಯಲಿರುವ ನೇಮಕಾತಿಗೆ ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. http://www.joinindianarmy.nic.in/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಕರ್ನಾಟಕದ ನೇಮಕಾತಿಗಳ ವಿವರ : ಶೀಘ್ರದಲ್ಲಿಯೇ ಹಾವೇರಿ, ಬೀದರ್ ಮತ್ತು ಬಳ್ಳಾರಿಯಲ್ಲಿ ನೇಮಕಾತಿಗಳು ನಡೆಯಲಿದ್ದು, ಅಕ್ಟೋಬರ್ 6ರಿಂದ 13ರವರೆಗೆ ಹಾವೇರಿಯಲ್ಲಿ ಮೊದಲ ನೇಮಕಾತಿ ನಡೆಯಲಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ವಿಜಯಪುರ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು. ಆ. 6ರಿಂದ ಸೆ. 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದರು.
2016ರಲ್ಲಿ 2ನೇ ನೇಮಕಾತಿ ನಡೆಯಲಿದ್ದು, ಜನವರಿ 6ರಿಂದ 16ರವರೆಗೆ ಬೀದರ್ ಜಿಲ್ಲೆಯಲ್ಲಿ ನೇಮಕಾತಿ ನಡೆಯಲಿದೆ. ಬೆಳಗಾವಿ, ರಾಯಚೂರು, ಬೀದರ್, ಕೊಪ್ಪಳ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಭಾಗವಹಿಸಲು ನ. 6ರಿಂದ ಡಿ. 23ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ವಿವರಣೆ ನೀಡಿದರು.
2016ರ ಫೆಬ್ರವರಿ 1ರಿಂದ ಬಳ್ಳಾರಿ ಜಿಲ್ಲೆಯಲ್ಲಿ ನೇಮಕಾತಿ ನಡೆಯಲಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಚಿತ್ರದುರ್ಗ, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳ ಅಭ್ಯರ್ಥಿಗಳು ಡಿ. 1ರಿಂದ ಜ. 18ರವರೆಗೆ ಅರ್ಜಿ ಸಲ್ಲಿಸಬಹುದು ಎಂದರು.












Click it and Unblock the Notifications