ದ್ವಿತೀಯ ಪಿಯುಸಿ ಪರೀಕ್ಷೆ; ಆನ್‌ಲೈನ್ ಪ್ರಶ್ನೆ ಪತ್ರಿಕೆ ಇಲ್ಲ
ಬೆಂಗಳೂರು, ನವೆಂಬರ್ 10 : ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳುಹಿಸಲು ಸಾಧ್ಯವಿಲ್ಲ. 2020ರ ಮಾರ್ಚ್ 4ರಿಂದ ಈ ಬಾರಿಯ ಪರೀಕ್ಷೆಗಳು ಆರಂಭವಾಗಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ ತಯಾರಿ ಕುರಿತು ಪೂರ್ವ ಸಿದ್ದತಾ ಸಭೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳಿಸುವ ಬಗ್ಗೆ ಚರ್ಚೆ ನಡೆಯಿತು.
2018ರ ಪರೀಕ್ಷೆ ಸಮಯದಲ್ಲಿ ಸರ್ಕಾರಿ ಕಾಲೇಜುವೊಂದಕ್ಕೆ ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳಿಸಲು ಪ್ರಯೋಗವನ್ನು ಮಾಡಲಾಗಿತ್ತು. ಆದರೆ, ಅದು ಯಶಸ್ವಿಯಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳಿಸಿದರೆ ನಿರಂತರ ವಿದ್ಯುತ್ ಪೂರೈಕೆ ಇರಬೇಕು. ಇಂಟರ್ ನೆಟ್ ಸಂಪರ್ಕ ಬೇಕು. ಫೋಟೋ ಕಾಪಿ ಮಾಡಲು ಯಂತ್ರ ಸೇರಿದಂತೆ ಇತರ ಸೌಲಭ್ಯಗಳು ಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಈ ವರ್ಷದ ಪರೀಕ್ಷೆಗೆ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಇಷ್ಟು ವ್ಯವಸ್ಥೆಗಳನ್ನು ಮಾಡಲು ಸಮಯ ಸಾಕಾಗುವುದಿಲ್ಲ ಎಂದು ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು. ಅಂತಿಮವಾಗಿ ಈ ವರ್ಷ ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳಿಸದಿರುವ ತೀರ್ಮಾನಕ್ಕೆ ಬರಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 4 ರಿಂದ ಮಾರ್ಚ್ 23ರ ತನಕ ಈ ಬಾರಿಯ ಪರೀಕ್ಷೆಗಳು ನಡೆಯಲಿವೆ.












Click it and Unblock the Notifications