ಮಾಧ್ಯಮದವರ ಮುಂದೆ ಸಿದ್ದರಾಮಯ್ಯಗೆ ನೊಟೀಸ್ ಕೊಡ್ತೀನಿ ಅಂದ್ರಾ ಡಿಕೆಶಿ?
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ, ಟಿಪ್ಪು ಸುಲ್ತಾನ್, ಸಾವರ್ಕರ್ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ನಡೆದಿದೆ. ಮೊಗಶಾಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ನಡೆಸಿದ್ದಾಗಿದೆ.
ಜೆಡಿಎಸ್ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾವರ್ ಅವರು ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಆಯ್ಕೆಯನ್ನು ಯಾವರೀತಿಯಲ್ಲಿ ಮಾಡಲಾಗುವುದು, ಅದಕ್ಕೆ ಕಾಂಗ್ರೆಸ್ ಅನುಸರಿಸುವ ರೂಲ್ಸ್ ಎಂಡ್ ರೆಗ್ಯುಲೇಶನ್ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ಡಿಕೆಶಿ, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಪರೋಕ್ಷವಾಗಿ, ಪಕ್ಷದ ಶಿಸ್ತು ಉಲ್ಲಂಘಿಸಿದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ನೊಟೀಸ್ ಇಶ್ಯೂ ಮಾಡುತ್ತೇನೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಒಕ್ಕಲಿಗ ನಾಯಕರ ಸಭೆಯಲ್ಲಿಯೂ ಕೂಡಾ ಡಿ.ಕೆ.ಶಿವಕುಮಾರ್ ಅವರು ಪಕ್ಷದೊಳಗಿನ ಭಿನ್ನಮತವನ್ನು ಪರೋಕ್ಷವಾಗಿ ಉಲ್ಲೇಖಿಸಿ ಬೇಸರ ವ್ಯಕ್ತ ಪಡಿಸಿದ್ದರು ಎನ್ನುವ ಸುದ್ದಿಯಿತ್ತು. ಇದರ ನಡುವೆ, ಮಾಧ್ಯಮದವರ ಮುಂದೆ ಡಿಕೆಶಿ ಆಡಿದ ಮಾತು, ರಾಜ್ಯದ ಇಬ್ಬರು ಪ್ರಮುಖ ಪಂಕ್ತಿಯಲ್ಲಿರುವ ನಾಯಕರ ನಡುವೆ ಇನ್ನಷ್ಟು ಕಂದಕವನ್ನು ಸೃಷ್ಟಿಸಲಿದೆಯಾ ಎನ್ನುವ ಚರ್ಚೆ ಆರಂಭವಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್
ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್, "ಕಾಂಗ್ರೆಸ್ಸಿನ ಚುನಾವಣಾ ಸಮಿತಿಯ ಸಭೆಯನ್ನು ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ, ಮೊದಲ ಸಭೆಯಲ್ಲಿ ಸುಮಾರು ಎರಡೂವರೆ ತಾಸು ಚರ್ಚೆ ನಡೆಸಿದ್ದೇವೆ. ಸುಮಾರು 1,350 ಅರ್ಜಿಗಳು ರಾಜ್ಯಾದ್ಯಂತ ಬಂದಿದೆ. ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಪಕ್ಷದ ಆಧಾರ ಸ್ಥಂಭಗಳಾದ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲಿ ಸಭೆ ನಡೆಸಿ, ಡಿಸೆಂಬರ್ 31ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಯಾರೂ ನೇರವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಅವಕಾಶವಿಲ್ಲ
"ಈ ಪ್ರಕ್ರಿಯೆಯನ್ನು ಹೊರತು ಪಡಿಸಿ, ಯಾರೂ ನೇರವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಅವಕಾಶವಿಲ್ಲ, ಯಾರಾದರೂ ಪಕ್ಷದ ಶಿಸ್ತನ್ನು ಮೀರಿದರೆ, ಅವರಿಗೆ ನೋಟಿಸ್ ಕೊಡುತ್ತೇನೆ" ಎಂದು ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಯಲ್ಲಿ ಮಾಧ್ಯಮದವರ ಮುಂದೆ ಹೇಳಿದರು. ಡಿಕೆಶಿ ನಡೆಸಿದ್ದ ಗೋಷ್ಠಿಯ ವೇಳೆ ಅಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಜರಿದ್ದರು.

ಸಿದ್ದರಾಮಯ್ಯ ಅವರು ಏಕಾಏಕಿ ಟಿಕೆಟ್ ಘೋಷಣೆ ಮಾಡುವುದು ಸರಿಯಲ್ಲ, ಜಾರಕಿಹೊಳಿ
ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯನವರು ಇತ್ತೀಚೆಗೆ ಕೆಲವು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಸಭೆಯಲ್ಲಿ ಪ್ರಕಟಿಸಿದ್ದರು. ಇದಕ್ಕೆ ಕಾಂಗ್ರೆಸ್ಸಿನಲ್ಲೇ ವಿರೋಧ ವ್ಯಕ್ತವಾಗಿತ್ತು. "ಸಿದ್ದರಾಮಯ್ಯ ಅವರು ಹೋದ ಕಡೆಯೆಲ್ಲಾ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ. ಟಿಕೆಟ್ ಗಾಗಿ ಅರ್ಜಿ ಹಾಕಿದವರಿಗೆ ತಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರು ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ"ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು.

ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಉಲ್ಲೇಖಿಸಿ ಎಂದು ವ್ಯಾಖ್ಯಾನ
ಡಿ.ಕೆ.ಶಿವಕುಮಾರ್ ಅವರು ನೋಟಿಸ್ ನೀಡುವುದಾಗಿ ಹೇಳಿದ್ದು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಉಲ್ಲೇಖಿಸಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇಬ್ಬರು ನಾಯಕರ ನಡುವಿನ ಅಂತರವನ್ನು ಕಮ್ಮಿಮಾಡಲು ಜಂಟಿಯಾಗಿ ಯಾತ್ರೆ ನಡೆಸುವಂತೆ ಹೈಕಮಾಂಡ್ ನಿರ್ದೇಶನ ನೀಡಿತ್ತು. ಅದರಂತೇ, ಜನವರಿ ಹನ್ನೊಂದರಿಂದ ಯಾತ್ರೆ ಆರಂಭವಾಗಲಿದೆ.












Click it and Unblock the Notifications