Karnataka Weather: ಮುಂಗಾರು ಆರಂಭವಾಗಿ ಎರಡು ತಿಂಗಳು: ಈ 9 ಜಿಲ್ಲೆಗಳಲ್ಲಿ ಮಳೆ ಕೊರತೆ
ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದಿದೆ, ತಡವಾಗಿಯಾದರೂ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ.
ಕಾವೇರಿ ಜಲಾನಯನ ಪ್ರದೇಶದ ಹಲವಾರು ಜಿಲ್ಲೆಗಳು ಇನ್ನೂ ಹೆಚ್ಚಿನ ಮಳೆ ಕೊರತೆಯನ್ನು ಎದುರಿಸುತ್ತಿವೆ. ಜೂನ್ 1 ರಿಂದ ರಾಜ್ಯದ ಒಟ್ಟಾರೆ ಮಳೆ ಕೊರತೆಯು 10% ಕ್ಕಿಂತ ಕಡಿಮೆಯಿದ್ದರೆ, ಇದು ಕಾವೇರಿ ಜಲಾನಯನ ಜಿಲ್ಲೆಗಳನ್ನು ಒಳಗೊಂಡಿರುವ ದಕ್ಷಿಣ ಒಳನಾಡಿನಲ್ಲಿ 22 ಪ್ರತಿಶತದಷ್ಟಿದೆ.

ಭಾನುವಾರ, ಕರಾವಳಿ, ಉತ್ತರ ಮತ್ತು ಕಾವೇರಿ ಜಲಾನಯನ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಧಾರವಾಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಮಳೆ ಕೊರತೆ
ಬೆಂಗಳೂರಿನಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಕೇಂದ್ರದ ಮುಖ್ಯಸ್ಥ ಎ ಪ್ರಸಾದ್ ಮಾಹಿತಿ ನೀಡಿ, ಒಟ್ಟಾರೆಯಾಗಿ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿದ್ದರೂ ಹಲವಾರು ಜಿಲ್ಲೆಗಳು ಕೊರತೆಯನ್ನು ಎದುರಿಸುತ್ತಿವೆ ಎಂದು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ. ರಾಮನಗರ (ಶೇ.-48), ಕೊಡಗು (ಶೇ.-47), ಹಾಸನ (ಶೇ.-39), ಕೋಲಾರ (ಶೇ.-29), ಶಿವಮೊಗ್ಗ (ಶೇ.-24) ಮತ್ತು ಚಿಕ್ಕಮಗಳೂರು (ಶೇ.-21) ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ.
47 ರಷ್ಟು ಮಳೆಯ ಕೊರತೆಯೊಂದಿಗೆ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಕೊಡಗು ಒಂದಾಗಿದೆ ಆದರೆ ಆಗಸ್ಟ್ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಜುಲೈ 21 ರಿಂದ 27 ರವರೆಗೆ ಸಕ್ರಿಯ ಮುಂಗಾರು ಅವಧಿಯಾಗಿದ್ದು, ಮಳೆಯ ಕೊರತೆಯನ್ನು ಮತ್ತಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. ಆಗಸ್ಟ್ 3ರವರೆಗೆ ಉತ್ತಮ ಮಳೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜುಲೈ 21 ರಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯದ ಮಳೆ ಕೊರತೆ ಶೇ.56 ರಿಂದ ಶೇ.29ಕ್ಕೆ ಕುಸಿದಿದೆ. ಆದರೆ ಹಲವಾರು ತಾಲ್ಲೂಕುಗಳು ಇನ್ನೂ ಸಾಕಷ್ಟು ಕೊರತೆಗಳನ್ನು ಹೊಂದಿವೆ ಮತ್ತು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಚುರುಕುಗೊಂಡ ಮಳೆ, ಒಳ ಹರಿವು ಹೆಚ್ಚಳ
ತಡವಾಗಿಯಾದರೂ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾನುವಾರ ಕೂಡ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಕೊಡಗು ಜಿಲ್ಲೆಯಲ್ಲಿ ಕಾವೇರಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೆಆರ್‌ಎಸ್, ಹಾರಂಗಿ, ಹೇಮಾವತಿ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೃಷ್ಣರಾಜ ಸಾಗರದಲ್ಲಿ (ಕೆಆರ್‌ಎಸ್) 124.80 ಅಡಿ ಸಾಮರ್ಥ್ಯದ ನೀರಿನ ಮಟ್ಟ ಭಾನುವಾರ ಸಂಜೆ 92.60 ಅಡಿ ಇತ್ತು.












Click it and Unblock the Notifications