ಬಾಗಲಕೋಟೆ : ಹಳ್ಳದ ದಂಡೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ
ಬಾಗಲಕೋಟೆ, ಅಕ್ಟೋಬರ್ 15 : ನನಗೆ ಈಗ ಕೇವಲ 12 ಗಂಟೆಯಷ್ಟೇ ವಯಸ್ಸು. ನನ್ನ ತೂಕ ಕೇವಲ ಒಂದೂವರೆ ಕೆಜಿ. ನೋಡೋಕೆ ಸುಂದರವಾಗಿದ್ದೀನಿ. ನನಗೂ ಈ ಜಗತ್ತಿನಲ್ಲಿ ಬಾಳಿ ಬದುಕಬೇಕೆಂಬ ಆಸೆ. ಆದರೆ ಯಾಕೋ ಏನೋ ನನ್ನ ತಾಯಿಗೆ ನಾನು ಇಷ್ಟವಾಗಲಿಲ್ಲವೇನೋ? ಅದಕ್ಕೆ ನನ್ನ ಜನರೇ ಇಲ್ಲದ ಹಳ್ಳದಲ್ಲಿ ಬಿಸಾಕಿ ಹೋಗಿದ್ದಾಳೆ.
ಆದರೆ, ನನ್ನ ಅದೃಷ್ಟ ಚೆನ್ನಾಗಿತ್ತು. ನನ್ನ ತಾಯಿಗೆ ಇಷ್ಟವಾಗದ ನಾನು, ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಇಷ್ಟವಾದೆ. ಅವರೇ ನನ್ನನ್ನ ರಕ್ಷಣೆ ಮಾಡಿ ಚಿಕಿತ್ಸೆ ಸಹ ಕೊಡಿಸಿದ್ದಾರೆ. ನನಗೆ ಅಪ್ಪ-ಅಮ್ಮ ಯಾರೂ ಇಲ್ಲ. ಅಪ್ಪ ಅಮ್ಮ ಯಾರೂ ಅಂತಾನೂ ಗೊತ್ತಿಲ್ಲ. ನನಗೆ ನೀವೇ ಎಲ್ಲಾ.

ಹೀಗಂತ ಆಗ ತಾನೆ ಜನಿಸಿದ್ದ ಅನಾಥ ಮಗುವೊಂದು ನೋಡೋಕೆ ಬಂದವರಿಗೆ ಅಳುವಿನ ಮೂಲಕ ತನ್ನ ಕಷ್ಟವನ್ನ ಹೇಳಿಕೊಳ್ಳುತ್ತಿತ್ತು. ಅಂದಹಾಗೆ ಈ ಘಟನೆ ನಡೆದದ್ದು ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದಲ್ಲಿ. ಬೇವೂರು ಮತ್ತು ಹಳ್ಳೂರು ಗ್ರಾಮಗಳ ಮಧ್ಯ ಇರೋ ಹಳ್ಳದ ಬಳಿ ಯಾರೋ ಪಾಪಿಗಳು ಆಗತಾನೆ ಜನಿಸಿದ್ದ ಹೆಣ್ಣು ಮಗುವೊಂದನ್ನ ಗೋಣಿ ಚೀಲದಲ್ಲಿ ಇಟ್ಟು ಹೋಗಿದ್ದಾರೆ.
ನಸುಕಿನ ಜಾವ ಶಿಶುವಿನ ತಾಯಿಗೆ ಹೆರಿಗೆಯಾಗಿದೆ. ಬಳಿಕ ಅಲ್ಲಿಯೇ ಬಿಟ್ಟು ತಾಯಿ ಪರಾರಿಯಾಗಿದ್ದಾಳೆ. ಬೆಳಗ್ಗೆ ಹೊಲಗದ್ದೆಗಳಿಗೆ ಹೋಗುವ ರೈತರು ಮಗುವಿನ ಅಳುವ ಶಬ್ದ ಕೇಳಿ, ಸ್ಥಳಕ್ಕೆ ಧಾವಿಸಿ ನೋಡಿದ್ದಾರೆ. ನಂತರ ಆಶಾ ಕಾರ್ಯಕರ್ತೆಯರಿಗೆ ಮಗುವನ್ನು ಬಿಟ್ಟು ಹೋಗಿರುವ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಆಶಾ ಕಾರ್ಯಕರ್ತೆಯರು ಮಗುವನ್ನು ರಕ್ಷಣೆ ಮಾಡಿ ಬೇವೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಈಗ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ.
'ಪತ್ತೆಯಾದ ವೇಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ತಂಪು ಹೆಚ್ಚಾಗಿ ಮಗುವಿನ ದೇಹ ಹಸಿರು ಬಣ್ಣಕ್ಕೆ ತಿರುಗಿತ್ತು. ತಕ್ಷಣಕ್ಕೆ ಬೇವೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನ ನೀಡಲಾಗಿದ್ದು ಮಗುವಿನ ಆರೋಗ್ಯ ಸುಧಾರಿಸಿದೆ' ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.
ಮಗು ಯಾರದ್ದು ಎಂದು ತಿಳಿದು ಬಂದಿಲ್ಲ. ಇದು ಅನೈತಿಕ ಸಂಬಂಧದಿಂದ ಹುಟ್ಟಿದ ಮಗುನಾ? ಅಥವಾ ಹೆಣ್ಣು ಮಗುವಾಗಿದೆ ಅಂತ ಈ ರೀತಿ ಬಿಟ್ಟು ಹೋಗಿದ್ದರಾ? ಎಂದು ತಿಳಿದುಬಂದಿಲ್ಲ. ಬೇವೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications