KEA: NEET ಅಭ್ಯರ್ಥಿಗಳಿಗೆ ಮಹತ್ವದ ಅಪ್ಡೇಟ್ ಇಲ್ಲಿದೆ! ಜುಲೈ 8 ಕೊನೆ ದಿನ, ಮಿಸ್ ಮಾಡಬೇಡಿ
ಬೆಂಗಳೂರು, ಜುಲೈ 06: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಳಿಗೆ (NEET-UG 2025) ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅಪ್ಡೇಟ್ ಸುದ್ದಿ ನೀಡಿದೆ. ರೋಲ್ ಸಂಖ್ಯೆ ದಾಖಲಿಸಲು, ಹೊಸದಾಗಿ ಅರ್ಜಿ ಸಲ್ಲಿಸಲು, ದಾಖಲೆ ಪರೀಶೀಲನೆಗೆ ಕುರಿತು ಮಾಹಿತಿ ಕೊಟ್ಟಿದೆ. ಅಭ್ಯರ್ಥಿಗಳು ಗಮನಿಸಬೇಕು. ಕೊನೆಯ ದಿನ ಜುಲೈ 8ರ ಒಳಗಾಗಿ ಕೆಇಎ ಸೂಚನೆ ಪಾಲಿಸುವಂತೆ ತಿಳಿಸಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗಳಿಗೆ (NEET-UG 2025) ಅರ್ಜಿ ಸಲ್ಲಿಸಿದ ಮತ್ತು ಪರೀಕ್ಷೆ ಅರ್ಹತೆ ಪಡೆದಿರುವ ಎಲ್ಲ ಅಭ್ಯರ್ಥಿಗಳು ನೀಟ್ ರೋಲ್ ನಂಬರ್ ಅನ್ನು ದಾಖಲಿಸಬೇಕಿದೆ. ಅದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು ರೋಲ್ ನಂಬರ್ ದಾಖಲಿಸಲು ಜುಲೈ 8ರಂದು ಬೆಳಗ್ಗೆ 11ರವರೆಗೆ ಅವಕಾಶ ಇದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಪ್ರವೇಶ ಪಡೆಯಬೇಕೆಂಬ ಹಂಬಲದಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ನೀಟ್ ರೋಲ್ ನಂಬರ್ ದಾಖಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಎಚ್.ಪ್ರಸನ್ನ ಅವರು ಸೂಚಿಸಿದ್ದಾರೆ.
ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್ ಅನ್ನು ಎನ್ ಟಿಎ ಡಾಟಾದೊಂದಿಗೆ ತಾಳೆ ಮಾಡಿ ಯುಜಿನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿ ನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ನಂತರ ವೆರಿಫಿಕೇಷನ್ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು.
ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ
ಈ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಹಾಗೂ ಇದುವರೆಗೂ ಕೆಇಎಯಲ್ಲಿ ಅರ್ಜಿ ಸಲ್ಲಿಸದೇ ಇರುವವರಿಗೆ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಜುಲೈ 7 ರಿಂದ 10ರವರೆಗೆ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರ ದಾಖಲೆ ಪರಿಶೀಲನೆಗೆ ನಂತರದ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ಎನ್‌ಆರ್‌ಐ ವಾರ್ಡ್ ದಾಖಲೆ ಪರಿಶೀಲನೆ ಮಾಹಿತಿ
ನೀಟ್ ಪರೀಕ್ಷೆಗೆಂದು ಸಲ್ಲಿಸಿದ ಅರ್ಜಿಯಲ್ಲಿ ಎನ್ ಆರ್ ಐ ವಾರ್ಡ್ ಕ್ಲೇಮ್ ಮಾಡಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಮೇತ ಜುಲೈ 8ರಿಂದ 10ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಗೆ ಖುದ್ದು ಭೇಟಿ ನೀಡಬೇಕು. ಅಗತ್ಯ ಪರಿಶೀಲನೆ ಮಾಡಿಸಿಕೊಳ್ಳುವುದು ಕಡ್ಡಾಯ. ಮೊದಲ ದಿನ, ನೀಟ್ ಪರೀಕ್ಷೆಯಲ್ಲಿ ನಾಲ್ಕು ಲಕ್ಷದವರೆಗೆ ರಾಂಕ್ ಪಡೆದವರು ಹಾಗೂ ಎರಡನೇ ದಿನ 8 ಲಕ್ಷ ಮತ್ತು ಮೂರನೇ ದಿನ 12 ಲಕ್ಷದವರೆಗೆ ರಾಂಕ್ ಪಡೆದವರು ದಾಖಲೆ ಪರಿಶೀಲನೆ ಗೆ ಬರಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಎಲ್ಲಿ, ವಿಳಾಸ?
ನೀಟ್ ಅಭ್ಯರ್ಥಿಗಳು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಪ್ರವೇಶಕ್ಕೆ ಅಪೇಕ್ಷೆಪಟ್ಟಿರುವ ಕ್ಯಾಟಗರಿ-2ರಿಂದ 8ರವರೆಗಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಜುಲೈ 9 ಮತ್ತು 10ರಂದು ಅದೇ ಕಾಲೇಜಿನಲ್ಲೇ ನಡೆಯಲಿದೆ. ಕೋರಮಂಗಲದ ಮೆಡಿಕಲ್ ಕಾಲೇಜಿನ ಕೌನ್ಸಿಲ್ ಕೊಠಡಿಯಲ್ಲಿ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲಾತಿಗಳ ಸಮೇತರಾಗಿ ಬಂದು ಎರಡೂ ದಿನಗಳು ಇದ್ದು, ದಾಖಲೆ ಪರಿಶೀಲಿಸಬೇಕು ಎಂದು ತಿಳಿಸಿದರು.












Click it and Unblock the Notifications