NEET ಎಕ್ಸಾಮೇ ಅಂತಿಮವಲ್ಲ ಎಂದು ಜಗತ್ತಿಗೆ ತೋರಿಸಿದ ತೀರ್ಥಹಳ್ಳಿಯ ಕುವರಿ: ಇಂದು ರೋಲ್ಸ್ ರಾಯ್ಸ್‌ನಲ್ಲಿ ಕೈತುಂಬಾ ಸಂಬಳ

"ಬದುಕಿನಲ್ಲಿ ಒಂದು ಬಾಗಿಲು ಮುಚ್ಚಿದರೆ, ನೂರಾರು ಬಾಗಿಲುಗಳು ತೆರೆದುಕೊಳ್ಳುತ್ತವೆ" ಎಂಬ ಮಾತಿಗೆ ಕರ್ನಾಟಕದ ತೀರ್ಥಹಳ್ಳಿಯ ರಿತುಪರ್ಣಾ ಕೆ.ಎಸ್ ಅವರ ಸಾಧನೆಯೇ ಒಂದು ಉತ್ತಮ ಉದಾಹರಣೆ. ಕನಸುಗಳು ಕಮರಿದಾಗ ಕುಸಿದು ಕೂರದೆ, ಒಲಿದು ಬಂದ ಅವಕಾಶವನ್ನೇ 'ಪಾಲಿಗೆ ಬಂದಿದ್ದು ಪಂಚಾಮೃತ' ಎಂದು ಸ್ವೀಕರಿಸಿ, ಅದರಲ್ಲಿಯೇ ಅತ್ಯುನ್ನತ ಸಾಧನೆ ಮಾಡಿದ ಅಪರೂಪದ ಕಥೆ ಇವರದ್ದು.

ವೈದ್ಯೆಯಾಗುವ ಕನಸು ಭಗ್ನವಾದಾಗ ನಿರಾಶೆಗೊಳ್ಳದೆ, ರೋಬೋಟಿಕ್ಸ್ ಲೋಕಕ್ಕೆ ಕಾಲಿಟ್ಟು, ಇಂದು ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ 'ರೋಲ್ಸ್ ರಾಯ್ಸ್'ನಲ್ಲಿ 72.3 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಪಡೆಯುವ ಮೂಲಕ ರಿತುಪರ್ಣಾ ಯುವಜನತೆಗೆ ರೋಲ್ ಮಾಡೆಲ್ ಆಗಿದ್ದಾರೆ.

NEET

ಯಾರು ಈ ರಿತುಪರ್ಣಾ?

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ 20 ವರ್ಷದ ರಿತುಪರ್ಣಾ, ಬಾಲ್ಯದಿಂದಲೂ ವೈದ್ಯೆಯಾಗುವ ಕನಸು ಕಂಡಿದ್ದರು. ಆದರೆ, ನೀಟ್ ಪ್ರವೇಶ ಪರೀಕ್ಷೆಯಲ್ಲಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಬಹುತೇಕ ವಿದ್ಯಾರ್ಥಿಗಳು ಇಂತಹ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಿ ಭವಿಷ್ಯವೇ ಮುಗಿದುಹೋಯಿತು ಎಂದು ಭಾವಿಸುತ್ತಾರೆ. ಆದರೆ, ಒಂದೇ ಒಂದು ಪ್ರವೇಶ ಪರೀಕ್ಷೆ ತಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ರಿತುಪರ್ಣಾ ಬಲವಾಗಿ ನಂಬಿದ್ದರು.

ದೊಡ್ಡ ಕಂಪನಿಯಲ್ಲಿ ಕಡಿಮೆ ಸಂಬಳವೇ ಉತ್ತಮ ಎಂದ ಬೆಂಗಳೂರು ಟೆಕ್ಕಿ! ಕಾರಣವೇನು ಗೊತ್ತಾ..
ದೊಡ್ಡ ಕಂಪನಿಯಲ್ಲಿ ಕಡಿಮೆ ಸಂಬಳವೇ ಉತ್ತಮ ಎಂದ ಬೆಂಗಳೂರು ಟೆಕ್ಕಿ! ಕಾರಣವೇನು ಗೊತ್ತಾ..

ಅವರು ಬೇಸರ ಮಾಡಿಕೊಳ್ಳದೆ, ಮಂಗಳೂರಿನ ಪ್ರತಿಷ್ಠಿತ 'ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್' ಸೇರಿ, ಮೆಕಾಟ್ರಾನಿಕ್ಸ್, ರೋಬೋಟಿಕ್ಸ್ ಮತ್ತು ಆಟೊಮೇಷನ್ ಇಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡರು. ಐಐಟಿಯಂತಹ ಟಾಪ್ ಸಂಸ್ಥೆಗಳ ಹಿನ್ನೆಲೆ ಇಲ್ಲದಿದ್ದರೂ, ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಹಾಗೂ ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಿದರು.

ಕೃಷಿ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗಾರರಿಗೆ ಸಹಾಯ ಮಾಡುವ ರೋಬೋಟ್ ಅಭಿವೃದ್ಧಿಪಡಿಸುವ ಮೂಲಕ ತಮ್ಮ ತಂತ್ರಜ್ಞಾನದ ಒಲವನ್ನು ಪ್ರದರ್ಶಿಸಿದರು ಮತ್ತು ಅಂತರಾಷ್ಟ್ರೀಯ ಮಟ್ಟದ ರೋಬೋಟಿಕ್ಸ್ ಸ್ಪರ್ಧೆಯಲ್ಲೂ ಪದಕ ಮುಡಿಗೇರಿಸಿಕೊಂಡರು.

ಇಂಟರ್ನ್‌ಶಿಪ್‌ ಬದಲಿಸಿತು ಭವಿಷ್ಯ

ತಮ್ಮ ಇಂಜಿನಿಯರಿಂಗ್ ವ್ಯಾಸಂಗದ ಅವಧಿಯಲ್ಲಿಯೇ, ರಿತುಪರ್ಣಾ ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಅವಕಾಶ ಪಡೆದರು. ಸತತ ಎಂಟು ತಿಂಗಳ ಕಾಲ ರಾತ್ರಿ-ಹಗಲು ಎನ್ನದೆ, ಕಾಲೇಜಿನ ಪ್ರಾಜೆಕ್ಟ್ ಮತ್ತು ಕಂಪನಿಯ ಕೆಲಸ ಎರಡನ್ನೂ ಅತ್ಯಂತ ಸಮರ್ಥವಾಗಿ ನಿಭಾಯಿಸಿದರು.

ಅವರ ಈ ಅದ್ಭುತ ಕಾರ್ಯಕ್ಷಮತೆ ಮತ್ತು ಪರಿಶ್ರಮವನ್ನು ಮೆಚ್ಚಿದ ಕಂಪನಿಯು, ಆರಂಭದಲ್ಲಿ 39.6 ಲಕ್ಷ ರೂ.ಗಳ ಆಫರ್ ನೀಡಿತ್ತು. ಬಳಿಕ ಅವರ ವಿಶೇಷ ಕೌಶಲ್ಯ ಮತ್ತು ಕೊಡುಗೆಯನ್ನು ಪರಿಗಣಿಸಿ, ಅದನ್ನು ಬರೋಬ್ಬರಿ 72.3 ಲಕ್ಷ ರೂ.ಗಳಿಗೆ ಹೆಚ್ಚಿಸಿತು!

ಡಿಸೆಂಬರ್ 2024 ರಿಂದ ಅವರು ರೋಲ್ಸ್ ರಾಯ್ಸ್‌ನಲ್ಲಿ ರೋಬೋಟಿಕ್ಸ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್.ಒ.ಎಸ್, ಗಜೆಬೋ, ಪೈಥಾನ್ ಮತ್ತು ಸಿ++ ಬಳಸಿ ರೋಬೋಟಿಕ್ ಸಾಫ್ಟ್‌ವೇರ್, ಕಂಟ್ರೋಲ್ ಅಲ್ಗಾರಿದಮ್ ಮತ್ತು ಸೆನ್ಸಾರ್ ಇಂಟಿಗ್ರೇಷನ್ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ.

ಪಾಲಿಗೆ ಬಂದಿದ್ದು ಪಂಚಾಮೃತ: ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ

ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಕಂಗಾಲಾಗುತ್ತಾರೆ. ಆದರೆ, "ಮಕ್ಕಳು ಯಾವುದಕ್ಕೂ ಬೇಜಾರು ಆಗಬಾರದು; ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸಿಕ್ಕ ಕೋರ್ಸ್‌ನಲ್ಲಿಯೇ ವಿಶೇಷವಾದದ್ದನ್ನು ಸಾಧಿಸಲು ಟ್ರೈ ಮಾಡಬೇಕು" ಎಂಬುದಕ್ಕೆ ಈ ರಿತುಪರ್ಣಾ ಅತ್ಯುತ್ತಮ ಉದಾಹರಣೆ.

'ಆಫರ್ ಲೆಟರ್ ನೋಡಿ ಫೇಕ್ ಎಂದೇ ಭಾವಿಸಿದ್ದೆ': ಗೂಗಲ್ ಉದ್ಯೋಗ ಗಿಟ್ಟಿಸಿಕೊಂಡ ಯುವತಿಯ ಸ್ಪೂರ್ತಿದಾಯಕ ಕಥೆ
'ಆಫರ್ ಲೆಟರ್ ನೋಡಿ ಫೇಕ್ ಎಂದೇ ಭಾವಿಸಿದ್ದೆ': ಗೂಗಲ್ ಉದ್ಯೋಗ ಗಿಟ್ಟಿಸಿಕೊಂಡ ಯುವತಿಯ ಸ್ಪೂರ್ತಿದಾಯಕ ಕಥೆ

ಒಂದು ಪರೀಕ್ಷೆಯ ಫಲಿತಾಂಶ ಇಡೀ ಜೀವನದ ಅಂತಿಮ ಘಟ್ಟವಲ್ಲ. ವೈದ್ಯಕೀಯ ಸೀಟು ಕೈತಪ್ಪಿದರೂ, ಬೇರೊಂದು ಕ್ಷೇತ್ರದಲ್ಲಿ ಅದಕ್ಕಿಂತಲೂ ಮಿಗಿಲಾದ ಸಾಧನೆ ಮಾಡಲು ಖಂಡಿತ ಸಾಧ್ಯವಿದೆ.

ನಿರಂತರ ಕಲಿಕೆ, ಹೊಸ ಅವಕಾಶಗಳಿಗೆ ತೆರೆದುಕೊಳ್ಳುವ ಮನಸ್ಸು ಹಾಗೂ ಕಠಿಣ ಶ್ರಮವಿದ್ದರೆ ಯಶಸ್ಸು ಖಂಡಿತ ಒಲಿಯುತ್ತದೆ. ದಾರಿ ಬದಲಾದಾಗ ಹತಾಶರಾಗದೆ, ಆ ಹೊಸ ದಾರಿಯಲ್ಲೇ ದೊಡ್ಡ ಮೈಲುಗಲ್ಲು ಸ್ಥಾಪಿಸಬಹುದು ಎಂಬುದನ್ನು ಕರ್ನಾಟಕದ ಈ ಯುವ ಪ್ರತಿಭೆ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ತೀರ್ಥಹಳ್ಳಿಯ ಹುಡುಗಿಯ ಈ ಪಯಣ, ತಮ್ಮ ಗುರಿ ತಲುಪಲು ಹೆಣಗಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಅದ್ಭುತ ಪ್ರೇರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+