E Swathu: ದಾಖಲೆ ಇಲ್ಲದ ಮನೆಗಳಿಗೂ ಇ-ಸ್ವತ್ತು: ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರದ ಬಿಗ್ ಗುಡ್‌ನ್ಯೂಸ್
ಬೆಂಗಳೂರು: ದಾಖಲೆ ಇಲ್ಲದ ಆಸ್ತಿಗಳನ್ನು ಹೊಂದಿರುವವರ ವಿಚಾರದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವ ನಿರ್ಧಾರ ಕೈಗೊಂಡಿದೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ ಹಳೆಯ ಮನೆಗಳಿಗೆ ಇ-ಸ್ವತ್ತು ನೀಡಲು ಮುಂದಾಗಿದ್ದು, ನಿಯಮಗಳಿಗೆ ತಿದ್ದುಪಡಿ ತರಲಾಗುವುದು. ಒಂದು ವೇಳೆ ಇ-ಸ್ವತ್ತು ವಿತರಣೆ ವಿಳಂಬವಾದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಉನ್ನತಾಧಿಕಾರಿಗಳೊಂದಿಗೆ ವಿಬಿಜಿ ರಾಮ್ ಜಿ, ಇ-ಸ್ವತ್ತು ಸಭೆ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ದಾಖಲೆ ಇಲ್ಲದವರಿಗೂ ಇ-ಸ್ವತ್ತು ನೀಡಲು ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎನ್ನುವ ಮೂಲಕ ಗುಡ್‌ನ್ಯೂಸ್ ನೀಡಿದರು.

100 ದಿನದಲ್ಲಿ ಇ-ಖಾತಾ ವಿತರಣೆ
ರಾಜ್ಯದಲ್ಲಿ ಗ್ರಾಮಠಾಣಾ ವ್ಯಾಪ್ತಿಗೆ ಸುಮಾರು ಸುಮಾರು 65 ಲಕ್ಷ ಆಸ್ತಿಗಳು ಬರುತ್ತವೆ. ಇದು ಅವರಿಗೆ ಪೂರ್ವಜರಿಂದ ಬಂದ ಬಳುವಳಿಯಾಗಿವೆ. ಹೀಗಾಗಿಯೇ ಕೆಲವರ ಬಳಿ ಆಸ್ತಿಗಳ ದಾಖಲೆ ಇಲ್ಲದಾಗಿದೆ. ಅವರ ಕಷ್ಟ ಗಮನಿಸಿ ಒಂದು ಬಾರಿ ನಿಯಮಾವಳಿ ಸರಳೀಕರಣ ಮಾಡುವ ಮೂಲಕ ಅವರಿಗೆ ಇ-ಸ್ವತ್ತು ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಆಸ್ತಿ ನೋಂದಣಿ, ಮಾರಾಟ, ವ್ಯವಹಾರ ಸುಗಮವಾಗುತ್ತದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಆಸ್ತಿ ಮಾಲೀಕರಿಂದ/ಸಾರ್ವಜನಿಕರ ಆಕ್ಷೇಪಣೆ ಕರೆದು 100 ದಿನಗಳ ಒಳಗಾಗಿ ಇ-ಖಾತಾ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಪಂಚಾಯಿತಿ ಮೇಲಾಧಿಕಾರಿಯೇ (PDO) ಹೊಣೆ: ಕ್ರಮದ ಎಚ್ಚರಿಕೆ
ನಿಯಮ ಸಡಿಲಿಸಿ ದಾಖಲೆ ಇಲ್ಲದವರಿಗೆ ಅನುಕೂಲವಾಗುವಂತೆ ಇ-ಸ್ವತ್ತು ವಿತರಣೆಗೆ ಕುರಿತು ಅಂತಿಮ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ಇ-ಸ್ವತ್ತಿಗಾಗಿ ಮಾಲೀಕರು ಅರ್ಜಿ ಸಲ್ಲಿಸಿದ ಎರಡು ವಾರದೊಳಗೆ (15 ದಿನ) ದಾಖಲೆ ವಿತರಿಸದೇ ಇದ್ದಲ್ಲಿ, ಅತ್ಯಧಿಕ ವಿಳಂಬ ಕಂಡು ಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ತಾಂತ್ರಿಕ ದೋಷ ಹೊರತುಪಡಿಸಿ, ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದ್ದರೆ ಅಂತಹ ಪಿಡಿಓಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು.
ಒಂದು ವೇಳೆ ಇ-ಸ್ವತ್ತು ವಿತರಣೆ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ವಿರುದ್ಧ ದೂರುಗಳೇನಾದರೂ ಬಂದಲ್ಲಿ, ಸಾಕ್ಷಿ ಸಹಿತ ದೂರು ಕೊಟ್ಟರೆ ಸರ್ಕಾರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.
10.16 ಲಕ್ಷ ಬಿ-ಖಾತಾ ವಿತರಣೆ, ಅರ್ಜಿ ಸಲ್ಲಿಕೆ ವಿಸ್ತರಣೆ
ಹೊಸದಾಗಿ ಯಾರಾದರೂ 11ಬಿ ಅರ್ಜಿ ಸಲ್ಲಿಸುವವರಿದ್ದರೆ ಅವರಿಗೆ ಅನುಕೂಲ ಆಗುವಂತೆ ಅರ್ಜಿ ಸಲ್ಲಿಕೆಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯದಲ್ಲಿ 10.16 ಲಕ್ಷ ಆಸ್ತಿಗಳಿಗೆ ಬಿ-ಖಾತಾ ನೀಡಲಾಗಿದೆ. ಇನ್ನೂ 90 ಲಕ್ಷ ಆಸ್ತಿಗಳಿಗೆ ಎ ಮತ್ತು ಬಿ ಖಾತಾ ನೀಡುವುದು ಬಾಕಿ ಇದೆ.
ಗ್ರಾಮೀಣ ಜನರ ಹಕ್ಕು – ನಮ್ಮ ಸರ್ಕಾರದ ಬದ್ಧತೆ.
— Eshwar Khandre (@eshwar_khandre) June 24, 2026
ಇಂದು ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಉನ್ನತಾಧಿಕಾರಿಗಳೊಂದಿಗೆ ಇ-ಸ್ವತ್ತು ಹಾಗೂ ಗ್ರಾಮೀಣ ಕುಡಿಯುವ ನೀರಿನ ಕುರಿತು ಮಹತ್ವದ ಸಭೆ ನಡೆಸಿದೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
✅ ದಾಖಲೆ ಇಲ್ಲದ ಗ್ರಾಮಠಾಣಾ ಹಳೆಯ ಮನೆಗಳಿಗೂ ನಿಯಮ ಸರಳೀಕರಣದ ಮೂಲಕ ಇ-ಸ್ವತ್ತು ನೀಡಲು ಕ್ರಮ.
✅… pic.twitter.com/bGuRWTyJk7
53 ಲಕ್ಷ ಇ-ಸ್ವತ್ತು ವಿತರಣೆ
ರಾಜ್ಯ ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ವಸತಿ ಬಡಾವಣೆಯಲ್ಲಿ ಸರ್ಕಾರಿ ಎ ಮತ್ತು ಬಿ ಖರಾಬು ಜಮೀನೂ ಬಳಸಿಕೊಂಡು ಲೇಔಟ್ ನಿರ್ಮಾಣ ಮಾಡಿದರೆ ಅವರಿಗೆ ಇ-ಸ್ವತ್ತು ನೀಡದಂತೆ ಅವರು ನಿರ್ದೇಶಿಸಿದರು. ದಿಶಾಂಕ್ ಆ್ಯಪ್ ನಲ್ಲಿ ಖರಾಬು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ಸಂಬಂಧ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಕರ್ನಾಟಕದಲ್ಲಿನ ಎಲ್ಲ 5928 ಗ್ರಾಮ ಪಂಚಾಯಿತಿಗಳ ಅಡಿ ಒಟ್ಟು 1.50 ಕೋಟಿ ಆಸ್ತಿಗಳಿವೆ. ಅದರಲ್ಲಿ 53 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ಸರ್ಕಾರ ನೀಡಿದೆ. ಈ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.













Click it and Unblock the Notifications