ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಟ್ವೀಟ್
ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿದೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮಧ್ಯಪ್ರವೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸಿ ಆರ್ಥಿಕ ನೆರವು ಘೋಷಿಸಿದ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಹವಾಮಾನ ವೈಪರೀತ್ಯ, ನಿರಂತರ ಬೆಲೆ ಕುಸಿತದಿಂದ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂಬಂಧ ಕೇಂದ್ರ ಕೃಷಿ ಸಚಿವರಿಗೆ ಜೂನ್ 17, 2026ರಂದು ಪತ್ರ ಬರೆದು ಮನವಿ ಸಲ್ಲಿಸಿದ್ದೆ. ಬುಧವಾರ ಸಂಜೆ ನವದೆಹಲಿಯಲ್ಲಿರುವ ಕೃಷಿ ಸಚಿವರ ನಿವಾಸಕ್ಕೆ ತೆರಳಿ ಮಾವು ಬೆಳೆಗಾರರ ಸಂಕಷ್ಟದ ಬಗ್ಗೆ, ರಾಜ್ಯದಲ್ಲಿನ ರೈತರ ಸ್ಥಿತಿಗತಿಗಳ ಬಗ್ಗೆ ಮಾವರಿಕೆ ಮಾಡಿಕೊಟ್ಟು ಕೂಡಲೇ ನೆರವಿಗೆ ಬರಬೇಕು ಎಂದು ಕೋರಿದ್ದೆ. ನನ್ನ ಮನವಿಗೆ ಸ್ಪಂದಿಸಿ ತಕ್ಷಣವೇ ಆರ್ಥಿಕ ನೆರವು ಘೋಷಣೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆಯೇ, ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme-MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ಪ್ರಮಾಣದ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಲ್‌ಗೆ ₹1,750 ಆರ್ಥಿಕ ನೆರವು ನೀಡುವ ಆದೇಶ ಹೊರಡಿಸಿದ್ದಾರೆ.

ಮಾವು ಬೆಳೆಗಾರರಿಗೆ ಈ ನೆರವು ಅತಿದೊಡ್ಡ ನೆರವಾಗಿದೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಅನ್ನದಾತರನ್ನು ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಂತಹ ಸಂಕಷ್ಟಗಳಿಂದ ಪಾರು ಮಾಡಲು ಕೇಂದ್ರವು ಅವಿರತವಾಗಿ ಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮತ್ತೊಮ್ಮೆ ರಾಜ್ಯದ ಜನತೆ ಪರವಾಗಿ, ಮಾವು ಬೆಳೆಗಾರರು, ರೈತಬಂಧುಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಎಚ್.ಡಿ ಕುಮಾರಸ್ವಾಮಿ ಪತ್ರ
ಇನ್ನು ಕೇಂದ್ರ ಸರ್ಕಾರಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಈಚೆಗೆ ಕರ್ನಾಟಕದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಪತ್ರ ಬರೆದಿದ್ದರು. ಕರ್ನಾಟಕದಲ್ಲಿ 2026-27ರಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ತೀವ್ರ ಸಂಕಷ್ಟದ ಬಗ್ಗೆ ನಿಮ್ಮ ಗಮನ ಸೆಳೆಯಲು ಮತ್ತು ರಾಜ್ಯದ ಮಾವು ರೈತರಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (MIS) ಮೂಲಕ ಬೆಲೆ ಕೊರತೆ ಪಾವತಿ ಯೋಜನೆ (PDPS) ಜಾರಿಗೆ ಮನವಿ ಮಾಡಿದ್ದರು.
ಕರ್ನಾಟಕವು ದೇಶದಲ್ಲಿ ಪ್ರಮುಖ ಮಾವು ಉತ್ಪಾದಿಸುವ ರಾಜ್ಯಗಳಲ್ಲಿ ಒಂದಾಗಿದೆ. ಮಾವು ಕೃಷಿ ಸುಮಾರು 1.45 ಲಕ್ಷ ಹೆಕ್ಟೇರ್‌ನಲ್ಲಿ ಹರಡಿಕೊಂಡಿದೆ ಮತ್ತು ಪ್ರಸ್ತುತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆ ಆಗಿದೆ. ಪ್ರಮುಖ ಮಾವು ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿ, ತಮ್ಮ ಆದಾಯಕ್ಕಾಗಿ ತೋಟಗಾರಿಕೆಯನ್ನು ಗಣನೀಯವಾಗಿ ಅವಲಂಬಿಸಿರುವ ಸಾವಿರಾರು ರೈತ ಕುಟುಂಬಗಳ ಜೀವನೋಪಾಯವಾಗಿದೆ.
ಆದಾಗ್ಯೂ, ಮಾರುಕಟ್ಟೆಯ ಏರಿಳಿತಗಳು, ಮಳೆ ಕೊರತೆಗಳು ಮತ್ತು ಬೆಲೆ ಇಳಿಕೆ ಮೇಲೆ ಪರಿಣಾಮ ಬೀರುವ ವಿಷಯಗಳಾಗಿದೆ. ಮಾವು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಲಾಭದಾಯಕ ಮಟ್ಟಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ. ಇದು ಗಣನೀಯ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಕರ್ನಾಟಕ ಕೃಷಿ ಬೆಲೆ ಆಯೋಗವು ಮಾವಿನ ಕೃಷಿಯ C-3 ವೆಚ್ಚವನ್ನು ಪ್ರತಿ ಕ್ವಿಂಟಲ್‌ಗೆ 3,951 ಎಂದು ನಿರ್ಣಯಿಸಿದೆ, ಆದರೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಈ ಮಾನದಂಡಕ್ಕಿಂತ ಗಣನೀಯವಾಗಿ ಕಡಿಮೆಯಾಗಿದ್ದು, ಕೃಷಿ, ನೀರಾವರಿ, ಕಾರ್ಮಿಕ ಮತ್ತು ಕೊಯ್ಲು ಕಾರ್ಯಾಚರಣೆಗಳಲ್ಲಿ ಗಮನಾರ್ಹ ಖರ್ಚು ಮಾಡಿದ ನಂತರ ಬೆಳೆಗಾರರು ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಪತ್ರ ಬರೆದಿದ್ದರು.














Click it and Unblock the Notifications