Mango Ban: ನೇಪಾಳದಿಂದ ಭಾರತದ ಮಾವಿಗೆ ನಿಷೇಧ, ಸಂಕಷ್ಟದಲ್ಲಿರುವ ಅಲ್ಲಿನ ವರ್ತಕರು ಹೇಳುವುದೇ ಬೇರೆ!
ನವದೆಹಲಿ: ಮುಂಗಾರು ಆರಂಭಕ್ಕೂ ಮುನ್ನ ಶುರುವಾದ ಮಾವಿನ ಹಣ್ಣಿನ ಋತು ಜುಲೈವರೆಗೆ ಮುಂದುವರಿಯಲಿದೆ. ಮಾರುಕಟ್ಟೆಯಲ್ಲಿ ಅಪಾರ ಮಾವು ಪೂರೈಕೆ ಆಗುತ್ತಿದೆ. ಈ ಸಂದರ್ಭದಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ವಿದೇಶಗಳು ನಮ್ಮ ದೇಶದ ಮಾವು ರಫ್ತಿಗೆ ನಿಷೇಧ ಹೇರಿವೆ. ಜಪಾನ್ ಬೆನ್ನಲ್ಲೆ ನೇಪಾಳ ಸಹ ಅಂಥದ್ದೇ ಬ್ಯಾನ್ ನಿರ್ಧಾರ ಪ್ರಕಟಿಸಿದ್ದು, ಭಾರತೀಯ ಮಾವು ಬೆಳೆಗಾರರು, ರಫ್ತುದಾರರಿಗೆ ಋತುವಿನಲ್ಲಿ ಭಾರೀ ಹಿನ್ನಡೆ ಆದಂತಾಗಿದೆ.
ನೇಪಾಳವು ಆಮದು ಮಾಡಿಕೊಳ್ಳುತ್ತಿದ್ದ ಮಾವಿನ ಹಣ್ಣುಗಳಲ್ಲಿ ಅತಿಯಾದ ರಾಸಾಯನಿಕ ಕ್ರಿಮಿನಾಶಕಗಳು ಪತ್ತೆಯಾಗಿವೆ. ಹೀಗಾಗಿ ಭಾರತೀಯ ಮಾವಿಗೆ ಕಳೆದ ಏಪ್ರಿಲ್-ಮೇ ತಿಂಗಳಿಂದ ನೇಪಾಳದಲ್ಲಿ ಈ ನಿರ್ಬಂಧ ಜಾರಿಗೊಳಿಸಿದ್ದು, ಮಾವು ಬ್ಯಾನ್ ಕ್ರಮವನ್ನು ಮುಂದುವರಿಸುವುದಾಗಿ ನೇಪಾಳ ತಿಳಿಸಿದೆ. ವಿದೇಶಿ ಮಾರುಕಟ್ಟೆ ನೆಚ್ಚಿಕೊಂಡು ಅಕಾಲಿಕ ಮಳೆ, ಅಲಿಕಲ್ಲು ಹೊಡೆತ ನಡುವೆಯು ಮಾವು ಸರಂಕ್ಷಿಸಿದ್ದ ಬೆಳೆಗಾರರಿಗೆ ಸದ್ಯ ಆಘಾತ ಉಂಟಾಗಿದೆ. ಇಳುವರಿ ಬಂದಾಗ ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನೇಪಾಳ ಕೃಷಿ ಸಚಿವಾಲಯ ಹೇಳುವುದೇನು?
ಭಾರತದಿಂದ ಬರುವ ಮಾವಿನಲ್ಲಿ ರಾಸಾಯನಿಕ ಹೆಚ್ಚಿದೆ. ಕೀಟಗಳು ಕಂಡು ಬರುತ್ತಿವೆ ಎಂದು ನೇಪಾಳ ಕೃಷಿ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಇದೇ ವೇಳೆ ತಾವು ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ನೇಪಾಳ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ದಶಕಗಳಿಂದ ಭಾರತದಿಂದ ಪೂರೈಕೆ ಆಗುತ್ತಿದ್ದ ಮಾವಿಗೆ ಜಪಾನ್‌ಗೆ ನಿಷೇಧ ಹೇರಿದ ಬೆನ್ನಲ್ಲೆ, ನೇಪಾಳ ಕ್ರಮವು ಭಾರತ ತೋಟಗಾರಿಕೆ ರೈತರನ್ನು ಚಿಂತೆಗೀಡು ಮಾಡಿದೆ.ಉತ್ತಮ ಇಳುವರಿ ಪಡೆದ ಬೆಳೆಗಾರರು ಮುಂದೆ ಮಾರಾಟ ಹೇಗೆ? ಎಂಬ ಆತಂಕದಲ್ಲಿದ್ದಾರೆ.
ನೇಪಾಳ ಮಾವು ವ್ಯಾಪಾರಿಗಳಿಗೆ ಸಂಕಷ್ಟ, ತಪಾಸಣೆ ಹೆಚ್ಚಳಕ್ಕೆ ಆಗ್ರಹ
ಮತ್ತೊಂದೆಡೆ ನೇಪಾಳದ ಮಾವಿನ ಹಣ್ಣಿನ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣಿನ ಪೂರೈಕೆ ಕಡಿಮೆ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾವು ಕೊರತೆ ಸೃಷ್ಟಿಯಾಗಿ ಬೆಲೆಗಳು ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ. ಭಾರತದಂತೆ ನೇಪಾಳವು ಮಾವು ಉತ್ಪಾದಿಸುವ ದೇಶಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಆದರೆ ಸ್ಥಳೀಯ ಉತ್ಪಾದನೆ ಸಾಕಾಗದ ಹಿನ್ನೆಲೆ ಭಾರತದಿಂದ ಮಾವು ರಫ್ತು ಮಾಡಿಕೊಳ್ಳುತ್ತಿತ್ತು.
ಭಾರತಕ್ಕೆ ಹೋಲಿಕೆ ಮಾಡಿದರೆ ನೇಪಾಳದ ಮಾವಿನ ಹಣ್ಣಿನ ಸೀಸನ್ ಬಲು ಸಣ್ಣದು. ಇದು ಕೇವಲ ಎರಡು ತಿಂಗಳು ಮಾತ್ರ ಇರುತ್ತದೆ. ಅಲ್ಲಿನ ವರ್ತಕರು, ವ್ಯಾಪಾರಿಗಳು ಈ ಎರಡು ತಿಂಗಳಲ್ಲಿ ಉತ್ತಮ ವ್ಯಾಪಾರ, ಲಾಭ ಕಾಣುತ್ತಾರೆ. ಹೀಗಾಗಿ ಭಾರತದ ಮಾವು ನಿಷೇಧ ಬದಲಿಗೆ, ಅದರ ಮೇಲಿನ ತಪಾಸಣೆ ಹೆಚ್ಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಮೂಲಕ ಜೀವನ ನಿರ್ವಹಣೆಗೆ ಅನುವು ಮಾಡಿಕೊಡುವಂತೆ ಕೋರಿದ್ದಾರೆ.
ಬೇರೆ ಬೇರೆ ದೇಶಗಳಿಗೂ ಭಾರತ ರಫ್ತು
ಅತ್ಯಧಿಕ ಮಾವು ಬೆಳೆಯುವ ಭಾರತ ಜಪಾನ್, ನೇಪಾಳ ಮಾತ್ರವಲ್ಲದೇ ಅಮೆರಿಕ, ಯುಎಇ, ಯುಕೆ ಮೊದಲಾದ ದೇಶಗಳಿಗೂ ರಫ್ತು ಮಾಡುತ್ತದೆ. ಎರಡು ದೇಶಗಳಿಂದ ಭಾರತದ ಮಾವು ಬ್ಯಾನ್ ಕ್ರಮ ಜಾರಿಯಾದ ಬೆನ್ನಲ್ಲೆ ಜಾಗತಿಕವಾಗಿ ಹಣ್ಣಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದರಿಂದ ಭವಿಷ್ಯದಲ್ಲಿ ಒಂದಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮಾವು ಬೆಳೆಗಾರರತ್ತ ಗಮನ ಹರಿಸಬೇಕಿದೆ ಎಂಬ ಒತ್ತಾಯ ಕೇಳಿ ಬಂದಿವೆ.
ಯಾವೆಲ್ಲ ಮಾವುಗಳಿಗೆ ನಿಷೇಧ
ಭಾರತದ ಪ್ರಮುಖ ಕೇಸರ, ಆಲ್ಫೋನೋ, ಲಂಗ್ರಾ, ಬಂಗನಪಲ್ಲಿ ಮಾವಿನ ತಳಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದಕ್ಕು ಮೊದಲು ಜಪಾನ್ ರಾಯಭಾರಿ ಅಧಿಕಾರಿಗಳು, ಉತ್ತರ ಪ್ರದೇಶದ ರಹಮಾನ್‌ಪುರದಲ್ಲಿ ಮಾವು ಸಂಸ್ಕರಣಾ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಆಗ ಈ ಮೇಲಿನ ತಳಿಗಳ ಮಾವಿನಲ್ಲಿ ರಾಸಾಯನಿಕ, ಇನ್ನಿತರ ಲೋಪಗಳು ಪತ್ತೆ ಆಗಿತ್ತು. ಹೀಗಾಗಿ ಎರಡು ದೇಶಗಳು ಮಾವು ನಿಷೇಧ ಘೋಷಿಸಿವೆ ಎಂದು ವರದಿ ಆಗಿದೆ.
ಜಪಾನ್ ಎರಡು ದಶಕಗಳ ಹಿಂದೆ ಅಂದರೆ 1986ರಲ್ಲಿ ಒಮ್ಮೆ ಭಾರತದ ಮಾವು ಕೊಳ್ಳದಿರಲು ನಿರ್ಧಾರಿಸಿತ್ತು. ಬಳಿಕ ಎಂದಿನಂತೆ ರಫ್ತು ಮುಂದುವರಿದಿದ್ದು, ಇದೀಗ ಮತ್ತೆ ನಿಷೇಧ ಕ್ರಮ ಜಾರಿಗೊಳಿಸಿದೆ.













Click it and Unblock the Notifications