ತುಂಗಭದ್ರಾ ಡ್ಯಾಂನ ಹೈಟೆಕ್ ಗೇಟ್‌ಗಳ ಲೋಕಾರ್ಪಣೆ: 33 ಟಿಎಂಸಿ ನೀರುಳಿಸಲು ಮಹತ್ವದ ತೀರ್ಮಾನ: ಡಿಕೆ ಶಿವಕುಮಾರ್
ಕೊಪ್ಪಳ: ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕೋಟ್ಯಾಂತರ ಜನರ ಜೀವನಾಡಿಯಾಗಿರುವ ರಾಜ್ಯದ ತುಂಗಭದ್ರಾ ಜಲಾಶಯಕ್ಕೆ ಯಶಸ್ವಿಯಾಗಿ ಅಳವಡಿಸಿದ ಹೈಟೆಕ್ ಕ್ರಸ್ಟ್ ಗೇಟ್‌ಗಳನ್ನು ಇಂದು ತ್ರಿವಳಿ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು. 'ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಕರ್ನಾಟಕ, ಆಂಧ್ರ ಪ್ರದಶ ಹಾಗೂ ತೆಲಂಗಾಣ ಮೂರೂ ರಾಜ್ಯಗಳು ಸೇರಿ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇವೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಜಿಲ್ಲೆಯ ಮುನಿರಾಬಾದ್ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತುಂಗಭದ್ರಾ ಅಣೆಕಟ್ಟೆಯ 33 ಕ್ರಸ್ಟ್ ಗೇಟುಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ದಕ್ಕು ಮುನ್ನ ಆರಾಧ್ಯ ಧೈವ್ ಶ್ರೀ ಗಂಗಾಧರ ಅಜ್ಜಯ್ಯ ಸ್ವಾಮಿಗಳ ಪೋಟೋಗೆ ಡಿಕೆಶಿ ನಮಿಸಿದರು. ಬಳಿಕ ಒಟ್ಟೊಟ್ಟಿಗೆ ನಾಲ್ಕು ಗೇಟ್ ತೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

33 ಟಿಎಂಸಿ ನೀರುಳಿಸಲು, ಬೇಡಿಕೆ ಈಡೇರಿಕೆಗೆ ತೀರ್ಮಾನ
ಮೂರು ರಾಜ್ಯಗಳ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ತುಂಗಭದ್ರಾ ಡ್ಯಾಂ ನೀರೇ ಆಧಾರವಾಗಿದೆ. ಈ ಅಣೆಕಟ್ಟಿನ 33 ಟಿಎಂಸಿ ನೀರನ್ನು ಉಳಿಸುವ ಬಗ್ಗೆ ರೈತ ಮುಖಂಡರು ಸಲ್ಲಿಸಿರುವ ಮನವಿ ಸಲ್ಲಿಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿದ್ದಾರೆ. ರೈತ ಕುಟುಂಬಗಳನ್ನು ಕಾಪಾಡುವ ನಿಟ್ಟಿನಲ್ಲಿ ಮೂರು ರಾಜ್ಯಗಳ ನಾವೆಲ್ಲ ಸಿಎಂ ಸೇರಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಚರ್ಚೆ ಮಾಡಿದ್ದೇವೆ.
ನವಿಲಿ ಸಮನಾಂತರ ಜಲಾಶಯ, ಹೂಳೆತ್ತುವ ವಿಚಾರ ಸೇರಿದಂತೆ ಎಲ್ಲಾ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಗಿದ್ದು, ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ತೀರ್ಮಾನವನ್ನು ಕೇಂದ್ರ ಸಚಿವರೇ ಪ್ರಕಟಿಸಲಿದ್ದಾರೆ. ಇಂದಿನ ಸಭೆಯ ವಿಷಯಗಳು ಮುಂದೆ ದೇಶದ ನೀರಾವರಿ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಇತಿಹಾಸದ ಪುಟಕ್ಕೆ ಸೇರಲಿವೆ. ನಮ್ಮ ನೀರು, ನಮ್ಮ ಹಕ್ಕು ಆಶಯದ ಅಡಿ ಮೂರು ರಾಜ್ಯಗಳ ರೈತರ ರಕ್ಷಣೆಗೆ ನಾವು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇವೆ ಎಂದಷ್ಟೇ ಹೇಳಿದರು.
ವಾರದಲ್ಲಿ ಗೇಟ್ ಬದಲಾವಣೆ
ಇದು ದಕ್ಷಿಣ ಭಾರತದ ಐತಿಹಾಸಿಕ ಕಾರ್ಯಕ್ರಮವಾಗಿದೆ. ಅಂದು 19ನೇ ಗೇಟ್ ತುಂಡರಿಸಿದಾಗ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಶಿವರಾಜ್ ತಂಗಡಗಿ ಹಾಗೂ ಅಧಿಕಾರಿಗಳು ಮಧ್ಯರಾತ್ರಿ ನನಗೆ ಕರೆ ಮಾಡಿ, ಅಣೆಕಟ್ಟು ನಡುಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ಅಂದು ಬೆಳಗ್ಗೆ 8 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದೆವು. ತಕ್ಷಣವೇ ಏನು ಮಾಡಬೇಕು ಎಂದು ತಜ್ಞರೊಂದಿಗೆ ಚರ್ಚಿಸಿ ಒಂದೇ ವಾರದಲ್ಲಿ ಗೇಟ್ ಬದಲಾವಣೆ ಮಾಡಲಾಯಿತು. ಆಮೂಲಕ ಈ ಭಾಗದ ರೈತರನ್ನು ರಕ್ಷಣೆ ಮಾಡಲಾಯಿತು ಎಂದರು.
ಗೇಟ್ ತುಂಡರಿಸಿದಾಗ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಿದರು. ಶಾರದ ದೇವಿ, ಹುಲಿಗೆಮ್ಮ ಹಾಗೂ ಹುಚ್ಚರಾಯಸ್ವಾಮಿಯ ಆಶೀರ್ವಾದ, ಅಜ್ಜಯ್ಯ ಅವರ ಪವಾಡ, ಹಂಪಿ ವಿರೂಪಾಕ್ಷನ ಕೃಪೆ, ರಾಘವೇಂದ್ರ ಸ್ವಾಮಿಯ ಶಕ್ತಿಯಿಂದಾಗಿ ಇಂತಹ ಮಹತ್ವದ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಸರ್ಕಾರ 33 ಗೇಟ್ ಬದಲಾಯಿಸಲು ತೀರ್ಮಾನಿಸಿ ಈ ಮೂರು ರಾಜ್ಯಗಳ ರೈತರ ರಕ್ಷಣೆಗೆ ಭಗವಂತ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದು ನಾನು ನೀರಾವರಿ ಸಚಿವನಾಗಿದ್ದೆ. ಇಂದು ಮುಖ್ಯಮಂತ್ರಿಯಾಗಿದ್ದೇನೆ.
ಅಣೆಕಟ್ಟು ಜೊತೆಗೆ ಮೂರು ರಾಜ್ಯಗಳ ರಕ್ಷಣೆ
ಇಂದು ಸಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಅವರು ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ತುಂಗಭದ್ರಾ ಅಣೆಕಟ್ಟು ರಕ್ಷಣೆ ಮಾಡಲಾಗಿದೆ. ನಾವು ಇತಿಹಾಸ ಓದುವುದು ಹಾಗೂ ಸ್ಮರಿಸುವುದಕ್ಕಿಂತ ಇತಿಹಾಸ ಸೃಷ್ಟಿಸುವುದು ನಮ್ಮ ಗುರಿ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತಿರುತ್ತೇನೆ. ಇಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಸೇರಿ ಕೋಟ್ಯಾಂತರ ಜನರಿಗೆ ಅಗತ್ಯವಾಗಿದ್ದ ಅಣೆಕಟ್ಟಿನ ಜೊತೆಗೆ ಮೂರು ರಾಜ್ಯಗಳ ರಕ್ಷಣೆ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಹೈಟೆಕ್ ಕ್ರಸ್ಟ್ ಗೇಟ್‌ಗಳಿವು, ಹೇಗೆ?
ತುಂಗಭದ್ರಾ ಜಲಾಶಯಗಳಿಗೆ ಅಳವಡಿಸಿದ ಹೊಸ ಕ್ರಸ್ಟ್ ಗೇಟ್‌ಗಳ ಪ್ರಮುಖ ಭಾಗಗಳಲ್ಲಿ ವೈಯರ್‍ಲೆಸ್ ಸೆನ್ಸಾರ್ ಅಳವಡಿಸಲಾಗಿದೆ. ಇವುಗಳು ಗೇಟ್‌ಗಳ ಚಲನೆ, ವಾಲಿಕೆ, ನೀರಿನ ಸಂಗ್ರಹವಾದಾಗ ಅದರ ಮಾಹಿತಿ ನೀಡುತ್ತವೆ. ತ್ರಿಡಿ ಆಯಾಮಗಳಲ್ಲಿ ಮಾಹಿತಿ ಪತ್ತೆಗೆ ಪೂರಕವಾಗುವಂತೆ ಅಳವಡಿಸಲಾಗಿದೆ. ಕ್ರಸ್ಟ್ ಗೇಟ್ ಪಕ್ಕದ ಗೋಡೆಗೆ ಅಳವಡಿಸಿರುವ ಪ್ರಮುಖ ರಿಪೀಟರ್ ಸಾಧನವು ಸೆನ್ಸಾರ್‍ನಿಂದ ಲಭ್ಯವಾಗುವ ಮಾಹಿತಿಯನ್ನು ಡ್ಯಾಂನ ನಿಯಂತ್ರಣ ಕೊಠಡಿಗೆ ಕಳುಹಿಸುತ್ತದೆ. ಕ್ಷಣ ಕ್ಷಣದ ಮಾಹಿತಿಯನ್ನು ಅಧಿಕಾರಿಗಳು ಕೂತಲ್ಲೇ ಪಡೆದುಕೊಳ್ಳುತ್ತಾರೆ.
ಅಣೆಕಟ್ಟು ಇತಿಹಾಸ ಸ್ಮರಿಸಿದ ಡಿಕೆಶಿ
ತುಂಗಭದ್ರಾ ನದಿಗೆ ಜಲಾಶಯ ನಿರ್ಮಿಸುವ ಆಲೋಚನೆಗೆ 1860 ರಲ್ಲೇ ಬ್ರಿಟಿಷ್ ಇಂಜಿನಿಯರ್ ಸರ್ ಆರ್ಥರ್ ಕಾಟನ್ ಅವರು ನಾಂದಿ ಹಾಡಿದ್ದರು. ತದನಂತರ 1949 ರಲ್ಲಿ ಇದರ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳುವ ಹೊತ್ತಿಗೆ ಅನೇಕ ಮಹನೀಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ದೇವರು ನಮಗೆ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಸೇವೆ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.














Click it and Unblock the Notifications