ಶಾಲೆ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರೋಗ್ಯ ಸಚಿವ
ಬೆಳಗಾವಿ, ಡಿಸೆಂಬರ್ 04: ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದ್ದು, ಜನವರಿಯಿಂದ ಶಾಲೆ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್ ಗಳನ್ನ ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಶುಚಿ ಒಂದು ಮಹತ್ವವಾದ ಯೋಜನೆ. ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯವಾಗಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಯೋಜನೆ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ. ಈಗಾಗಲೇ ನಾಲ್ಕು ವಿಭಾಗವಾರು ಟೆಂಡರ್ ಆಹ್ವಾನಿ ಬಹುತೇಕ ಪ್ರಕ್ರಿಯೇ ಪೂರ್ಣಗೊಳಿಸಲಾಗಿದೆ.
10 ವರ್ಷದಿಂದ 18 ವರಗಷದ ಒಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗು ನ್ಯಾಪ್ಕಿನ್ ಗಳನ್ನ ವಿತರಿಸಲಾಗುವುದು. ಈ ಮೊದಲು ಸರ್ಕಾರಿ ಆಸ್ಪತ್ರೆಯ ಮೂಲಕ ನ್ಯಾಪ್ಕಿನ್ ಗಳನ್ನ ವಿತರಿಸಲಾಗುತ್ತಿತ್ತು. ಈ ಬಾರಿ ನೇರವಾಗಿ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕನ್ ಗಳನ್ನ ವಿತರಿಸುವಂತೆ ಏಜನ್ಸಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
40.50 ಕೋಟಿ ಯೋಜನೆ ಇದಾಗಿದ್ದು, ಸಂಪೂರ್ಣ ಹಣಕಾಸನ್ನ ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ನೆರವು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ಗುಂಡೂರಾವ್, ಪ್ರಾಯೋಗಿಕವಾಗಿ ಮೆನ್ ಸ್ಟ್ರಲ್ ಮುಟ್ಟಿನ ಕಪ್ ಗಳನ್ನ ದಕ್ಷಿಣ ಕನ್ನಡ, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15 ಸಾವಿರ ಮುಟ್ಟಿನ ಕಪ್ ಗಳನ್ನ ವಿತರಿಸಲಾಗಿದೆ ಎಂದು ಇದೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅನುದಾನಿತ ಶಾಲಾ ಕಾಲೇಜುಗಳಲ್ಲಿನ ಹುದ್ದೆಗಳ ಭರ್ತಿಗೆ ಕ್ರಮ
ರಾಜ್ಯದಲ್ಲಿ 2016 ಜನವರಿಯಿಂದ ಇದುವರೆಗೆ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ರಾಜೀನಾಮೆ ಇತರೆ ಕಾರಣಗಳಿಂದ ಖಾಲಿ ಇರುವ ಭೋದಕ ಮತ್ತು ಭೋದಕೇತರ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಪರಿಷತ್ ನಲ್ಲಿ ನಿಯಮ 330 ರಡಿ ಸದಸ್ಯರಾದ ಮಧು ಜಿ ಮಾದೇಗೌಡ, ಮರಿ ತಿಬ್ಬೇಗೌಡ, ಎಸ್.ಎಲ್. ಭೋಜೇಗೌಡ ಹಾಗೂ ಶಶಿಲ್ ಜಿ ನಮೋಶಿ ಅವರು ಮಂಡಿಸಿದ್ದ ವಿಷಯಕ್ಕೆ ಉತ್ತರಿಸಿ ಮಾತನಾಡಿದರು, ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 1 ನೇ ಜನೆವರಿ 2016 ರಿಂದ 31 ನೇ ಡಿಸೆಂಬರ್ 2020 ರ ವರೆಗೆ ನಿವೃತ್ತಿ, ಮರಣ, ರಾಜೀನಾಮೆ ಇನ್ನಿತರೆ ಕಾರಣಗಳಿಂದ
ಖಾಲಿಯಾಗಿರುವ 4521 ಭೋಧಕ ಹುದ್ದೆಗಳನ್ನು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಬಾಕಿ ಇರುವ 267 ಭೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸಹಮತಿ ನೀಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.












Click it and Unblock the Notifications