ಬೆಂಗಳೂರು ಮಾತ್ರವಲ್ಲ ಜಿಲ್ಲೆಗಳಲ್ಲೂ ಸಿಗಲಿದೆ ನಂದಿನಿ ಇಡ್ಲಿ, ದೋಸೆ ಹಿಟ್ಟು
ಬೆಂಗಳೂರು, ಜನವರಿ 04: ಬಹಳಷ್ಟು ಟೀಕೆ, ಚರ್ಚೆಯ ಬಳಿಕ ಕೆಎಂಎಫ್ ತನ್ನ 'ನಂದಿನಿ' ಬ್ರಾಂಡ್ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರು ನಗರದಲ್ಲಿ ಡಿಸೆಂಬರ್ 25ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಲಭ್ಯವಿರುವ ಈ ಉತ್ಪನ್ನ ಬಹಳ ಜನಪ್ರಿಯವಾಗಿದೆ. ಈ ಯಶಸ್ಸಿನ ಹಿನ್ನಲೆಯಲ್ಲಿ ಇತರ ಜಿಲ್ಲೆಗಳಲ್ಲೂ ಇದನ್ನು ಮಾರಾಟ ಮಾಡಲು ಕೆಎಂಎಫ್ ತೀರ್ಮಾನ ಮಾಡಿದೆ.
ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಇದು ಲಭ್ಯವಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಜನರ ಬೇಡಿಕೆಯಂತೆ ಇತರ ಜಿಲ್ಲೆಗಳಲ್ಲಿ ಈ ಉತ್ಪನ್ನ ಮಾರಾಟ ಮಾಡಲು ಕೆಎಂಎಫ್ ನಿರ್ಧರಿಸಿದೆ. ಒಂದು ವಾರದಲ್ಲಿ ಬೆಂಗಳೂರು ನಗರದ ಸುತ್ತಮುತ್ತಲ ಇತರ ಜಿಲ್ಲೆಗಳಲ್ಲಿ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಲಭ್ಯವಾಗಲಿದೆ.
ಕೆಎಂಎಫ್ ಅಧ್ಯಕ್ಷರ ಪೋಸ್ಟ್: ನಂದಿನಿ ಇಡ್ಲಿ, ದೋಸೆ ಹಿಟ್ಟು ಮಾರಾಟದ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. 'ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್) ಮೊದಲ ಬಾರಿಗೆ 'ನಂದಿನಿ ಬ್ರ್ಯಾಂಡ್' ನ ವೇ ಪ್ರೋಟೀನ್‌ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು ವಿಧಾನಸೌಧದಲ್ಲಿ ಸನ್ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸಿದ್ದರಾಮಯ್ಯ ಅವರ ಜೊತೆ ದಿನಾಂಕ 25/11/2024ರಂದು ಆರಂಭಿಕ ಹಂತದಲ್ಲಿ ಬಿಡುಗಡೆ ಮಾಡಿದ್ದು ನಂದಿನಿ ಬ್ರಾಂಡ್ ಗೆ ಮಾರುಕಟ್ಟೆಯಿಂದ ಮೊದಲ ಹಂತದಲ್ಲೇ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ.
ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ನಂದಿನಿಯ ರುಚಿಕರ ದೋಸೆ ಇಡ್ಲಿ ಹಿಟ್ಟಿಗೆ ಗ್ರಾಹಕರು ಮನಸೋತಿದ್ದು, ಮಾರುಕಟ್ಟೆಗೆ ಲಗ್ಗೆಯಿಟ್ಟ ಕೇವಲ ಮೂರೇ ದಿನಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುವ ಮೂಲಕ ತನ್ನ ಛಾಪು ಮೂಡಿಸಿದೆ ಎಂದು ನಿಮಗೆ ತಿಳಿಸಲು ತುಂಬಾ ಸಂತೋಷವೆನಿಸುತ್ತಿದೆ. ಮುಂದಿನ ದಿನದಲ್ಲಿ ಪ್ರೊಟೀನ್ ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು ಎಲ್ಲಾ ಕಡೆಯೂ ವಿಸ್ತರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ಮೂರು ದಿನದಲ್ಲಿ 2250 ಮೆಟ್ರಿಕ್ ಟನ್‌ಗಳಷ್ಟು ಹಿಟ್ಟು ಮಾರಾಟವಾಗಿದೆ. ಬೆಂಗಳೂರಿನ ಜಯನಗರಲ್ಲಿ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಪ್ಯಾಕಿಂಗ್ ಮಾಡಲು ಘಟಕವನ್ನು ತೆರೆಯಲಾಗಿದ್ದು, ಇಲ್ಲಿಂದ ನಗರದ ವಿವಿಧ ಪ್ರದೇಶಗಳಿಗೆ ಹಿಟ್ಟು ಸರಬರಾಜು ಆಗುತ್ತಿದೆ.
ಎರಡು ಮಾದರಿಯ ಪ್ಯಾಕ್‌ನಲ್ಲಿ ಹಿಟ್ಟು ಮಾರುಕಟ್ಟೆಗೆ ಬಂದಿದೆ. 450 ಗ್ರಾಂ ಪ್ಯಾಕ್‌ಗೆ 40 ರೂ. ಮತ್ತು 900 ಗ್ರಾಮ ಪ್ಯಾಕ್‌ಗೆ 80 ರೂ. ದರವನ್ನು ನಿಗದಿ ಮಾಡಲಾಗಿದೆ. ಈ ಉತ್ಪನ್ನಕ್ಕೆ ಜನರ ಪ್ರತಿಕ್ರಿಯೆಯ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ನಗರ, ಪಟ್ಟಣದ ಮಾರುಕಟ್ಟೆಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ಕೆಎಂಎಫ್ ಹೇಳಿತ್ತು.
ಖಾಸಗಿ ಕಂಪನಿಗಳ ಇಡ್ಲಿ, ದೋಸೆ ಹಿಟ್ಟಿಗೆ ಹೋಲಿಕೆ ಮಾಡಿದರೆ ಇದರ ದರ ಕಡಿಮೆ ಇದೆ. ಅಲ್ಲದೇ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಜಿಮ್, ಡಯಟ್ ಮಾಡುವವರ ಗಮನ ಸೆಳೆದಿದೆ. ಆದ್ದರಿಂದ ವ್ಯಾಪಾರವೂ ಜೋರಾಗಿದೆ.
ಮೊದಲು ಕೆಎಂಎಫ್ 2024ರ ನವೆಂಬರ್‌ನಲ್ಲಿಯೇ ನಂದಿನಿ ದೋಸೆ, ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜಗದೀಶ್ ವರ್ಗಾವಣೆಯ ಕಾರಣ ಬಿಡುಗಡೆ ತಡವಾಗಿತ್ತು.
ಆಗ ಸಾಮಾಜಿಕ ಜಾಲತಾಣಗಳಲ್ಲಿ ಕೇರಳ ಮೂಲದ ಖಾಸಗಿ ಕಂಪನಿ ಲಾಬಿಗೆ ಮಣಿದು ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಎಂಎಫ್ ಎಂಡಿ ವರ್ಗಾವಣೆ ಮಾಡಿ, ಇಡ್ಲಿ & ದೋಸೆ ಹಿಟ್ಟು ಬಿಡುಗಡೆಗೆ ತಡೆ ಹಾಕಿದೆ ಎಂದು ಟೀಕಿಸಲಾಗಿತ್ತು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈಗಾಗಲೇ ಕರ್ನಾಟಕದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಇಡ್ಲಿ, ದೋಸೆ ಹಿಟ್ಟುಗಳಿವೆ. ಇದಕ್ಕೆ ಪೈಪೋಟಿ ನೀಡಲು ಕೆಎಂಎಫ್ ಕರ್ನಾಟಕದ ಪ್ರಸಿದ್ಧ ಬ್ರಾಂಡ್ ಆದ ನಂದಿನಿ ಬ್ರಾಂಡ್ ಹೆಸರಿನಲ್ಲಿ ದೋಸೆ, ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ತಂದಿದೆ.












Click it and Unblock the Notifications