ಚಿರತೆಯಿಂದ ಅತ್ತೆ ರಕ್ಷಿಸಿದ ಸೊಸೆಗೆ ಸಿಗಲಿದೆ 'ಕಿತ್ತೂರು ರಾಣಿ ಚನ್ನಮ್ಮ ಸಾಹಸ ಪ್ರಶಸ್ತಿ': ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನಡೆದ ಘಟನೆ ಕೇವಲ ಆಕಸ್ಮಿಕವಷ್ಟೇ ಅಲ್ಲ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಶಿಸಿದ್ದಾರೆ. ಜೊತೆಗೆ ಕಷ್ಟದ ಸಂದರ್ಭದಲ್ಲಿ ಧೈರ್ಯ, ಸಾಹಸ ಮೆರೆದ ಸೊಸೆಗೆ ಪ್ರಶಸ್ತಿ ನೀಡುವ ಕುರಿತು ಮಾತನಾಡಿದ್ದಾರೆ.
ಮೈಸೂರಿನ ಸಿದ್ಧಾರ್ಥ ನಗರದಲ್ಲಿ ಇತ್ತೀಚೆಗೆ ಸುರೇಶ್ ಎಂಬುವವರ ಮನೆಯಲ್ಲಿ ಚಿರತೆ ಪ್ರತ್ಯೆಕ್ಷವಾಗಿತ್ತು. ಅವರ ವಯಸ್ಸಾದ ತಾಯಿ ಅವರಿದ್ದ ಕೋಣೆಯೊಳಗೆ ಹೊಕ್ಕಿತ್ತು. ಮಂಚದಡಿ ಚಿರತೆ ಅಡಗಿ ಮಲಗಿತ್ತು. ಅದನ್ನು ಕಂಡು ಮನೆಯವರು, ಅಕ್ಕಪಕ್ಕದವರೆಲ್ಲ ಆತಂಕ್ಕೀಡಾಗಿದ್ದರು. ಕಿಟಕಿಯಿಂದ ಅರವಳಿಕೆ ನೀಡಿದ ಅರಣ್ಯಾಧಿಕಾರಿಗಳು ನಾಲ್ಕು ವರ್ಷದ ಗಂಡು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ವಯಸ್ಸಾದ ಅತ್ತೆ ಇರುವ ಮಂಚದಡಿ ಚಿರತೆ ಕಂಡ ಸೊಸೆ ಸುಜಾತಾ ಅವರು ಕೋಣೆಯಿಂದ ಅತ್ತೆ ಕರೆತಂದು ಚಿಲಕ ಹಾಕಿ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಇದೀಗ ಸೊಸೆಯ ಕಾರ್ಯ, ಜಾಣತನ, ಸಮಯ ಪ್ರಜ್ಞೆಯಿಂದ ಅತ್ತೆಯ ಜೀವ ಉಳಿದಿದೆ. ಈ ಬಗ್ಗೆ ಖುದ್ದು ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು 'ಎಕ್ಸ್' ಮೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಸೊಸೆ ಕಾರ್ಯ ಕೊಂಡಾಡಿದ್ದಾರೆ.
ಸೊಸೆಗೆ 'ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ'
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಇದು 'ಸಾಹಸ ಮತ್ತು ಬಾಂಧವ್ಯದ ಅಪರೂಪದ ಸಂಗಮ' ಎಂದಿದ್ದಾರೆ. ತಮ್ಮ ಮನೆಯ ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ. ಸಾಕ್ಷಾತ್ ಮೃತ್ಯುವಿನ ದವಡೆಯಿಂದ ಅತ್ತೆಯನ್ನು ರಕ್ಷಿಸಿದ ಅವರ ಸಮಯಪ್ರಜ್ಞೆ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ. ಅತ್ತೆ-ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ, ಸುಜಾತಾ ಅವರ ಈ ಅಸಾಧಾರಣ ಶೌರ್ಯವನ್ನು ನಾನು ಮನತುಂಬಿ ಶ್ಲಾಘಿಸುತ್ತೇನೆ. ಅವರ ಈ ಸಾಹಸವನ್ನು ಗೌರವಿಸಲು ಮುಂದಿನ ವರ್ಷದ 'ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ' ಗೆ ಅವರ ಹೆಸರನ್ನು ಪರಿಗಣಿಸಲು ನಮ್ಮ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಧೈರ್ಯವಂತ ಮಹಿಳೆಯರೇ ಈ ನಾಡಿನ ನಿಜವಾದ ಶಕ್ತಿ. ಸುಜಾತಾ ಅವರ ಈ ಶೌರ್ಯದ ಗಾಥೆ ಮನೆ ಮನಗಳಿಗೆ ತಲುಪಲಿ ಎಂದರು.












Click it and Unblock the Notifications