Mysore Dasara 2026: ನಾಡಹಬ್ಬ ಮೈಸೂರು ದಸರಾ 2026 ಉದ್ಘಾಟನೆ ವಿಚಾರ: ಬಿಜೆಪಿ ಕಾರ್ಯಕರ್ತರನ್ನೂ ಸೆಳೆದ ಸಿಎಂ ಡಿ.ಕೆ ಶಿವಕುಮಾರ್

ನಾಡಹಬ್ಬ ಮೈಸೂರು ದಸರಾ 2026 ಉದ್ಘಾಟನೆ ವಿಚಾರದಲ್ಲಿ ಈ ಬಾರಿ ಯಾವುದೇ ವಿವಾದ ಅಥವಾ ಭಿನ್ನಾಭಿಪ್ರಾಯ ಆಗದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನೋಡಿಕೊಂಡಿದ್ದಾರೆ. ಕಳೆದ ಬಾರಿ ದಸರಾ ಉದ್ಘಾಟನೆಯನ್ನು ಲೇಖಕಿ ಬಾನು ಮುಷ್ತಾಕ್ ಅವರು ಮಾಡಿದ್ದರು. ಆದರೆ, ಈ ವಿಚಾರವು ವಿವಾದಕ್ಕೆ ಕಾರಣವಾಗಿತ್ತು.

ಕನ್ನಡ ಭಾಷೆ, ಕನ್ನಡ ಬಾವುಟ ವಿಚಾರಕ್ಕೆ ಸಂಬಂಧಿಸಿದಂತೆ 2023ರಲ್ಲಿ ಬಾನು ಮುಷ್ತಾಕ್ ಅವರು ಮಾಡಿದ್ದ ಭಾಷಣ ಹಾಗೂ ಅದರಲ್ಲಿದ್ದ ಕೆಲವೊಂದು ಆಕ್ಷೇಪಾರ್ಹ ಸಂಗತಿಗಳು 2025ರಲ್ಲಿ ಮುನ್ನಲೆಗೆ ಬಂದಿತ್ತು. ಆದರೆ ಈ ಬಾರಿಯ ಮೈಸೂರು ದಸರಾ ಉದ್ಘಾಟನೆಯಲ್ಲಿ ಯಾವುದೇ ವಿವಾದವಾಗದಂತೆ ಡಿ.ಕೆ ಶಿವಕುಮಾರ್ ಅವರು ಜಾಣ್ಮೆಯ ನಡೆ ಪ್ರದರ್ಶಿಸಿದ್ದಾರೆ. ಕಳೆದ ಬಾರಿ ಕೆಲವರು ಉದ್ದೇಶಪೂರ್ವಕವಾಗಿ ಬಾನು ಮುಷ್ತಾಕ್ ಅವರು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

Mysuru Dasara 2026 CM D K Shivakumar s Inauguration Decision Wins Praise Even from BJP Workers

ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡಬೇಕು ಎಂದು ಕರ್ನಾಟಕ ಸರ್ಕಾರ ಅವರನ್ನು ಆಹ್ವಾನಿಸಿದ ಸಂದರ್ಭದಲ್ಲಿಯೇ ಅವರ ಭಾಷಣದ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕನ್ನಡ ತಾಯಿ ಭುವನೇಶ್ವರಿಯನ್ನು ಅನುಮಾನಿಸಿರುವವರಿಂದ ದಸರಾ ಉದ್ಘಾಟನೆ ಆಗಬಾರದು ಎಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದ್ದರು. ‌

ನಾಡಹಬ್ಬ ಮೈಸೂರು ದಸರಾ 2026 ಉದ್ಘಾಟನೆಯನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬೆಳಕಿನ ಹಬ್ಬ, ಭಕ್ತಿಯ ಉತ್ಸವ, ಕರುನಾಡಿನ ಸಾಂಸ್ಕೃತಿಕ ಕಿರೀಟ ನಮ್ಮ ಮೈಸೂರು ದಸರಾ. ಚಿನ್ನದ ಅಂಬಾರಿಯ ಗಾಂಭೀರ್ಯ ಹಾಗೂ ಅರಮನೆಯ ಝಗಮಗಿಸುವ ದೀಪಗಳ ನಡುವೆ, ತಾಯಿ ಚಾಮುಂಡೇಶ್ವರಿಯ ವೈಭವವನ್ನು ಕಣ್ತುಂಬಿಕೊಳ್ಳುವ ಸಮಯವೇ ನಮ್ಮ ಮೈಸೂರು ದಸರಾ.

ಈ ಬಾರಿಯ ನಾಡಹಬ್ಬ ಮೈಸೂರು ದಸರಾ 2026 ಅನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಸಂತರು ಮತ್ತು ಸಂಸ್ಕೃತಿಯ ಈ ಅಪೂರ್ವ ಮಿಲನ ನಮ್ಮ ನಾಡಿನ ಪರಂಪರೆಯನ್ನು ಮತ್ತಷ್ಟು ಬೆಳಗಲಿದೆ. ನಾಡಿನೆಲ್ಲೆಡೆ ಭಕ್ತಿ, ಸಡಗರದ ಹೊನಲು ಹರಿಯಲಿ, ದಸರಾ ಸಂಭ್ರಮ ಮನೆಮನಗಳಲ್ಲಿ ನಲಿಯಲಿ ಎಂದಿದ್ದಾರೆ.

Mysuru Dasara 2026: ನೆಟ್ಟಿಗರು ಹೇಳಿದ್ದೇನು ?

ಮೈಸೂರು ದಸರಾ ಉದ್ಘಾಟನೆಯನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ ಎನ್ನುವ ವಿಷಯವು ಕನ್ನಡಿಗರಲ್ಲಿ ಸಂತೋಷವನ್ನುಂಟು ಮಾಡಿದೆ. ನಾನು ಬಿಜೆಪಿ ಪಕ್ಷದ ಕಾರ್ಯಕರ್ತ ಆದರೂ ನಿಮ್ಮ ನಡೆ ಇಷ್ಟವಾಗುತ್ತಿದೆ ಎಂದು ಬಿಜೆಪಿಯ ಕಾರ್ಯಕರ್ತರು ಸಹ ಕಾಮೆಂಟ್ ಮಾಡುತ್ತಿದ್ದಾರೆ.

ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ 'ಉತ್ತರ ಕರ್ನಾಟಕದ ಕುಂಭಮೇಳ' ಎಂದೇ ಪ್ರಸಿದ್ಧವಾಗಿರುವ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಯವರು ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುತ್ತಿರುವುದು ನಾಡಿಗೆ ಹೆಮ್ಮೆಯ ವಿಷಯ. ಅವರ ಸರಳತೆ, ಕರುಣೆ ಹಾಗೂ ಸಮಾಜಮುಖಿ ಕಾರ್ಯಗಳು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿವೆ. ನಾಡಹಬ್ಬ ದಸರಾಗೆ ಶ್ರೀಗಳ ದಿವ್ಯ ಸಾನ್ನಿಧ್ಯ ಮತ್ತು ಆಶೀರ್ವಾದ ದೊರೆಯುತ್ತಿರುವುದು ದಸರಾ ರಂಗಿಗೆ ಮತ್ತಷ್ಟು ಪಾವಿತ್ರ್ಯತೆ ಮತ್ತು ಮೆರಗು ತಂದಿದೆ. ಸರ್ಕಾರದ ಈ ನಿರ್ಧಾರ ಅತ್ಯಂತ ಸಂತಸ ತಂದಿದೆ ಎಂದೂ ನೆಟ್ಟಿಗರು ಹೇಳಿದ್ದಾರೆ.

ಮೈಸೂರು ದಸರಾ ಉದ್ಘಾಟನೆಗೆ ಪರಮಪೂಜ್ಯ ಗವಿ ಸಿದ್ದೇಶ್ವರ ಮಹಾಸ್ವಾಮಿಗಳನ್ನ ಆಯ್ಕೆ ಮಾಡಿದಕ್ಕಾಗಿ ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಧನ್ಯವಾದಗಳು.. ಇದು ನಮ್ಮ ಕಲ್ಯಾಣ ಕರ್ನಾಟಕಕ್ಕೆ ಸಂದ ಗೌರವ ಅಂತಲೂ ಈ ಭಾಗದ ಜನ ಹೇಳಿದ್ದಾರೆ. ಒಟ್ಟಾರೆ ಈ ಬಾರಿಯ ದಸರಾ ಉದ್ಘಾಟನೆ ವಿಚಾರವು ವಿವಾದಿಂದ ಮುಕ್ತವಾಗುವುದು ಮಾತ್ರವಲ್ಲ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿರ್ಧಾರಕ್ಕೆ ಮೆಚ್ಚುಗೆಯೂ ವ್ಯಕ್ತವಾಗುವಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+