MUDA Scam: Role Of The Chief Minister, ವೈರಲ್ ಆಯಿತು ಕೋರ್ಟ್ ಕಲಾಪದ ವಿಡಿಯೋ
ಬೆಂಗಳೂರು, ಸೆಪ್ಟೆಂಬರ್ 01: ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶನಿವಾರ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ವೇಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಆಗಸ್ಟ್ 19, 29 ಮತ್ತು 31ರಂದು ಮೂರು ದಿನಗಳ ಕಾಲ ನಡೆದಿದೆ. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 2ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

ಸಿದ್ದರಾಮಯ್ಯ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ, ಕರ್ನಾಟಕ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದ ಸಂಜೆಯ ತನಕ ಅರ್ಜಿಯ ವಿಚಾರಣೆ ನಡೆದಿದೆ. ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಕೋರ್ಟ್ ಕಲಾಪದ ವಿಡಿಯೋ ವೈರಲ್: ಶನಿವಾರದ ಹೈಕೋರ್ಟ್ ಕಲಾಪದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕೇಳಿರುವ ಒಂದು ಪ್ರಶ್ನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ದೂರುದಾರರ ಪರ ವಕೀಲರಿಗೆ ಇದು ಸಿದ್ದರಾಮಯ್ಯ ಪ್ರಾಸಿಕ್ಯುಷನ್‌ಗೆ ಸಂಬಂಧಿಸಿದ ವಿಚಾರ. ಸಿಎಂ ಸಿದ್ದರಾಮಯ್ಯ ಪಾತ್ರವೇನೆಂದು ಯಾರೂ ಹೇಳುತ್ತಿಲ್ಲವಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ವಿಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ಗೆ ಪ್ರಶ್ನೆಗಳ ಬಾಣವನ್ನು ಬಿಡುತ್ತಿದ್ದಾರೆ. ಮುಡಾ ಮುಡಾ ಎಂದು ಹೇಳುವ ನೀಡು ಈ ಪ್ರಶ್ನೆಗೆ ಉತ್ತರ ಕೊಡಿ ಎಂದು ಪ್ರತಿಪಕ್ಷದ ನಾಯಕರುಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಪೋಸ್ಟ್‌ಗಳಿಗೆ ಪರ, ವಿರೋಧವಾದ ಕಮೆಂಟ್‌ಗಳು ಬರುತ್ತಿವೆ.
ಎಲ್ರೂ ಮೂಡ ಮೂಡ ಅಂತ ಹೊಯ್ಕೋತಿದೀರಿ ಆದ್ರೆ ಇದ್ರಲ್ಲಿ ಮುಖ್ಯ ಮಂತ್ರಿಯ ಪಾತ್ರ ಏನೂ ಅಂತ ಯಾವಾನೂ ಹೇಳ್ತಿಲ್ವಲ್ರಯ್ಯ ಅಂತ ಕೇಳ್ತಿದ್ದಾರೆ ಜಜ್ಜು...
— LATPOTBABA (@LATPOTBABA1) August 31, 2024
🤣🤣 pic.twitter.com/DakIGukAxd
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ 'ಮೈಸೂರು ಚಲೋ' ಹೆಸರಿನಲ್ಲಿ ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆ ನಡೆಸಿದ್ದವು. ಈಗ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರ ಕೊಡಿ ಎಂದು ವಿಡಿಯೋವನ್ನು ಹಾಕಿ ಪ್ರಶ್ನೆ ಮಾಡಲಾಗುತ್ತಿದೆ.
ಕರ್ನಾಟಕದ ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ ಆದೇಶಿಸಿದ್ದಾರೆ. ಸಿದ್ದರಾಮಯ್ಯ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವಿಚಾರ ಸರ್ಕಾರ ಮತ್ತು ರಾಜಭವನ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಗೆ ಸಹ ಕಾರಣವಾಗಿದೆ.
ಪ್ರತಿಪಕ್ಷಗಳು ಮುಡಾ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿವೆ. ಆದರೆ ಆಗ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಬಿಜೆಪಿ ಸರ್ಕಾರ. ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದರು. ಆದ್ದರಿಂದ ಹಗರಣದಲ್ಲಿ ಅವರ ಪಾತ್ರ ಏನು? ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಈಗ ನ್ಯಾಯಮೂರ್ತಿಗಳು ಕೇಳಿರುವ ಪ್ರಶ್ನೆ ಮುಂದಿಟ್ಟುಕೊಂಡು ವಿರೋಧ ಪಕ್ಷವನ್ನು ಪ್ರಶ್ನೆ ಮಾಡಲಾಗುತ್ತಿದೆ.












Click it and Unblock the Notifications