ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ: ಮುಸ್ಲಿಮರಿಗೆ ಮಸೀದಿಗಳಲ್ಲಿ ಪ್ರಕಟಣೆ
ಬೆಂಗಳೂರು, ಡಿಸೆಂಬರ್ 12: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಈಶಾನ್ಯ ಭಾರತ ಸೇರಿದಂತೆ ಎಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕೆಲವು ವರ್ಗ ಈ ಮಸೂದೆಯನ್ನು ಸ್ವಾಗತಿಸಿದ್ದರೆ, ಇನ್ನು ಕೆಲವು ವರ್ಗಗಳು ಮಸೂದೆಯನ್ನು ಕಟುವಾಗಿ ಟೀಕಿಸಿವೆ. ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಈ ಮಸೂದೆಯಿಂದ ತಮ್ಮ ಪೌರತ್ವದ ಹಕ್ಕು ಕಳೆದುಕೊಳ್ಳುತ್ತೇವೆ ಎಂಬ ಭೀತಿ ಅನೇಕರಲ್ಲಿ ಮೂಡಿದೆ.
ತಾವು ಈ ದೇಶದ ಅಧಿಕೃತ ನಿವಾಸಿಗಳು ಹೌದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲ ಮೂಲ ದಾಖಲೆಗಳು ತಮ್ಮ ಬಳಿ ಇವೆಯೇ ಎಂಬುದನ್ನು ಪುನರ್ ಪರಿಶೀಲನೆ ಮಾಡಿಕೊಳ್ಳುವಂತೆ ದಕ್ಷಿಣ ಭಾರತದ ಮಸೀದಿಗಳಲ್ಲಿ ಪ್ರಾರ್ಥನಾ ಅವಧಿಯ ವೇಳೆ ಪ್ರಕಟಣೆಗಳನ್ನು ನೀಡಲಾಗುತ್ತಿದೆ.
ಈ ಐಡೆಂಟಿಟಿ ದಾಖಲೆಗಳ ಪರಿಶೀಲನೆಯು ಮುಂಜಾಗ್ರತಾ ಕ್ರಮವಾಗಿ ಅಗತ್ಯವಾಗಿದೆ. ದೇಶದಾದ್ಯಂತ ಮುಂಬರುವ ದಿನಗಳಲ್ಲಿ ಜಾರಿಯಾಗಲಿರುವ ಪೌರತ್ವ ನೋಂದಣಿ ಕಾಯ್ದೆಯ (ಎನ್‌ಆರ್‌ಸಿ) ಅಡಿ ಅಕ್ರಮ ಒಳನುಸುಳುವಿಕೆಗೆ ಪ್ರತಿಯಾಗಿ ಇದನ್ನು ಮಾಡುತ್ತಿಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಸ್ಪಷ್ಟಪಡಿಸುತ್ತಿದ್ದಾರೆ.

ದಕ್ಷಿಣ ರಾಜ್ಯಗಳ ಧರ್ಮಗುರುಗಳ ಸಭೆ
ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಸೀದಿಗಳ ಧರ್ಮ ಗುರುಗಳು ಕಳೆದ ವಾರ ನಡೆಸಿದ ಸಮಾಲೋಚನೆ ಬಳಿಕ ಈ ಪ್ರಕಟಣೆ ಹೊರಡಿಸಲಾಗಿದೆ. ಈ ಮೂಲಕ ಅವರು ತಮ್ಮ ಸಮುದಾಯದ ಜನರು ತಮ್ಮ ಬಳಿ ಇರುವ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ, ತಪ್ಪು ಮಾಹಿತಿಗಳನ್ನು ಹೊಂದಿರದಂತೆ ಹಾಗೂ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಖಚಿತಪಡಿಸಿಕೊಳ್ಳುವಂತೆ ಎಚ್ಚರಿಸಲು ಪ್ರಯತ್ನಿಸಲಾಗುತ್ತಿದೆ.

ನಾಗರಿಕ ಕೇಂದ್ರ ಸ್ಥಾಪನೆ
ಬೆಂಗಳೂರಿನಲ್ಲಿರುವ ಜಾಮಿಯಾ ಮಸೀದಿಯು ಮೂರು ತಿಂಗಳ ಹಿಂದೆಯೇ 'ನಾಗರಿಕ ಕೇಂದ್ರ'ವನ್ನು ಆರಂಭಿಸಿದೆ. ಇಲ್ಲಿ ಮುಸ್ಲಿಂ ಸಮುದಾಯದ ಜನರು ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಮತ್ತು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಈ ಕೇಂದ್ರ ಜನಸಾಮಾನ್ಯರಿಗೆ ಸಹಾಯ ಮಾಡುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ದಾಖಲೆ ನಿರ್ವಹಣೆಗೆ ಜಾಗೃತಿ
'ಈ ದಿನದವರೆಗಿನ ತಮ್ಮ ಎಲ್ಲ ದಾಖಲೆಗಳನ್ನು ಸುಭದ್ರವಾಗಿ ಇರಿಸಿಕೊಳ್ಳುವುದು ಭಾರತದ ಪ್ರತಿಯೊಬ್ಬ ಪ್ರಜೆಗೂ ಅಗತ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಮಿಯಾ ಮಸೀದಿಯ ಮೂಲಕ ಪ್ರಯತ್ನ ನಡೆಸಲಾಗಿದೆ. ಅಲ್ಲಿ ಮುಸ್ಲಿಮರಿಗೆ ತಮ್ಮ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ತಿಳಿ ಹೇಳುತ್ತಿದ್ದೇವೆ' ಎಂದು ಬೆಂಗಳೂರಿನ ಜಾಮಿಯಾ ಮಸೀದಿಯ ಇಮಾಮ್ ಮಕ್ಸೂದ್ ಇಮ್ರಾನ್ ತಿಳಿಸಿದರು.

ಕೆಲವರ ದಾಖಲೆಗಳಲ್ಲಿ ವ್ಯತ್ಯಾಸ
ನಾಗರಿಕ ಕೇಂದ್ರದಲ್ಲಿ ಸಮುದಾಯದ ಜನರ ದಾಖಲೆಗಳ ಪರಿಶೀಲನೆ ವೇಳೆ ಕೆಲವರ ಆಧಾರ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತಿತರ ದಾಖಲೆಗಳಲ್ಲಿ ನಮೂದಾಗಿರುವ ಮಾಹಿತಿಗಳಲ್ಲಿ ವ್ಯತ್ಯಾಸ ಕಂಡುಬಂದಿವೆ. ಹೀಗಾಗಿ ಅವುಗಳನ್ನು ಕೂಡಲೇ ಸರಿಪಡಿಸಿಕೊಳ್ಳುವಂತೆ ಹಾಗೂ ಭವಿಷ್ಯದಲ್ಲಿ ಯಾವುದೇ ತೊಂದರೆಗೆ ಸಿಕ್ಕಿಕೊಳ್ಳದಂತೆ ಸೂಚಿಸುತ್ತಿರುವುದಾಗಿ ಹೇಳಿದರು.












Click it and Unblock the Notifications