Monkeypox Symptoms: ಮಂಕಿಪಾಕ್ಸ್ ನಿಂದ ತಪ್ಪಿಸಿಕೊಳ್ಳಲು ಈ ಸರಳ ಸೂತ್ರ ಅನುಸರಿಸಿ
ಮಂಕಿಪಾಕ್ಸ್ ವೈರಸ್‌ನ ಆತಂಕ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ. ಎಂ ಪಾಕ್ಸ್ ಎನ್ನುವುದು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ವೈರಲ್ (ಝೂನೋಟಿಕ್) ರೋಗವಾಗಿದೆ. ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮಂಕಿಪಾಕ್ಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಹಾಗಾದರೆ, ಈ ಮಂಕಿಪಾಕ್ಸ್ ಯಾವ ರೀತಿ ಹರಡುತ್ತದೆ. ಇದನ್ನು ತಪ್ಪಿಸುವುದು ಹೇಗೆ ಎನ್ನುವ ಸರಳ ಸೂತ್ರಗಳು ಇಲ್ಲಿವೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಸಹ ಮಂಕಿಪಾಕ್ಸ್ ರೋಗದ ಆತಂಕದಿಂದ ದೂರವಾಗಬಹುದು.
ಮಂಕಿಪಾಕ್ಸ್ ರೋಗದ ಲಕ್ಷಣಗಳು
ಮಂಕಿಪಾಕ್ಸ್‌ನ ರೋಗದ ಲಕ್ಷಣಗಳು ಈಗ ಇರುವ ಸಾಂಕ್ರಾಮಿಕ ರೋಗಗಳಿಗಿಂತಲೂ ಭಿನ್ನವಾಗಿದೆ. ಅಲ್ಲದೇ ಉಳಿದ ಸಾಂಕ್ರಾಮಿಕ ರೋಗ ಲಕ್ಷಣಗಳಲ್ಲಿ ಕಾಣುವ ಸಂಗತಿಗಳು ಇದರಲ್ಲಿ ಇಲ್ಲ. ಹೀಗಾಗಿ, ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಈ ರೋಗ ಪ್ರಮುಖ ಲಕ್ಷಣಗಳು ಈ ರೀತಿ ಇವೆ.

ದೇಹದಲ್ಲಿ ದದ್ದು: ಈ ರೋಗದ ಪ್ರಮುಖ ಲಕ್ಷಣವೆಂದರೆ ಅದು ದೇಹದ ವಿವಿಧ ಭಾಗದಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು. ಈ ದದ್ದುಗಳು ಸಾಮಾನ್ಯವಾಗಿ 2ರಿಂದ 4 ವಾರಗಳ ವರೆಗೆ ಇರುವ ಸಾಧ್ಯತೆ ಇರುತ್ತದೆ.
ದುಗ್ಧರಸ ಗ್ರಂಥಿಗೆ ಹಾನಿ: ಮಂಕಿಪಾಕ್ಸ್‌ನ ಎರಡನೇ ಪ್ರಮುಖ ಲಕ್ಷಣವೆಂದರೆ, ಇದರಿಂದ ದುಗ್ಧರಸ ಗ್ರಂಥಿಗಳು ಅಂದರೆ ಕುತ್ತಿಗೆಯ ಭಾಗದಲ್ಲಿ ಹಾಗೂ ಕಿವಿಯ ಕೆಳಭಾಗದಲ್ಲಿ ಊದಿಕೊಳ್ಳುತ್ತದೆ. ಅಲ್ಲದೇ ಇದರಿಂದ ನೋವು ಸಹ ಆಗುತ್ತದೆ.
ಇದಲ್ಲದೆ ಜ್ವರ, ತಲೆನೋವು, ಸ್ನಾಯುನೋವು, ಬೆನ್ನುನೋವು, ನಿಶಕ್ತಿ ಹಾಗೂ ಚಳಿ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.
ರೋಗದಿಂದ ಪಾರಾಗಲು ಈ ಸರಳ ಸೂತ್ರ ಅನುಸರಿಸಿ
* ಮಂಕಿಪಾಕ್ಸ್‌ನಿಂದ ತಪ್ಪಿಸಿಕೊಳ್ಳಲು ಇರುವ ಸರಳ ಸೂತ್ರ ಎಂದರೆ ಅದು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ನಿತ್ಯ ಸ್ನಾನ ಮಾಡುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು ಮಾಡಬೇಕು.
* ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಅಥವಾ ಲೈಂಗಿಕ ಸಂಪರ್ಕವನ್ನು ತಪ್ಪಿಸಬೇಕು. ಈ ರೋಗವು ಸೋಂಕಿತ ವ್ಯಕ್ತಿಯ ದೇಹದ ಮೇಲಿನ ದ್ರವಗಳು, ಶರೀರದ ಮೇಲಿನ ದದ್ದು ಸ್ರಾವಗಳ ಮೂಲಕ ಹರಡುತ್ತದೆ. ಹೀಗಾಗಿ, ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದು ಅಥವಾ ಅವರೊಂದಿಗೆ ಶಾರೀರಿಕ ಸಂಪರ್ಕದಲ್ಲಿ ಇರುವುದನ್ನು ತಪ್ಪಿಸಬೇಕು.
ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ?
ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಶಂಕಿತ ಪ್ರಕರಣ ವರದಿಯಾಗಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ವಿದೇಶದಿಂದ ಬಂದಿರುವ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಇರುವ ಶಂಕೆ ವ್ಯಕ್ತವಾಗಿದ್ದು. ಆ ವ್ಯಕ್ತಿಯ ರಕ್ತದ ಮಾದರಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದೆ. ಮಂಕಿಪಾಕ್ಸ್ ಪ್ರಕರಣವನ್ನು ಪತ್ತೆ ಮಾಡಲು ಹಾಗೂ ದೇಶದಲ್ಲಿ ಇದರ ಮೂಲವನ್ನು ತಿಳಿಯಲು ಸಂಪರ್ಕ ಪತ್ತೆ ಅಂದರೆ ಕೇಸ್ ಸ್ಟಡಿ ಹಾಗೂ ರೋಗಿಯ ಹಿಸ್ಟರಿ ಪರಿಶೀಲನೆ ಪ್ರಕ್ರಿಯೆಗಳು ನಡೆದಿದೆ ಎನ್ನಲಾಗಿದೆ.












Click it and Unblock the Notifications