ನಿಗಮ ಮಂಡಳಿ: ಶಾಸಕರ ಸಂಖ್ಯೆಯಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಮಹತ್ವದ ಹೇಳಿಕೆ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು, ಡಿಸೆಂಬರ್30: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್ ನಿಮಗ ಮಂಡಳಿ ನೇಮಕದ ಕುರಿತು ಹೈಕಮಾಂಡ್ ಗೆ ಫೈನಲ್ ಲಿಸ್ಟ್ ನೀಡಿದೆ. ಮೊದಲ ನಿಗಮ ಮಂಡಳಿ ಪಟ್ಟಿಯಲ್ಲಿ ಕೇವಲ ಶಾಸಕರಿಗೆ ಅವಕಾಶ ನೀಡಿದ್ದಾರೆ ಎಂಬ ಮಾತುಗಳಿಗೆ ವಿರೋಧ ಕೇಳಿ ಬಂದಿತ್ತು.
ನಿಗಮ ಮಂಡಳಿ ನೇಮಕದ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸ್ಥಾನಮಾನ ನೀಡಲಾಗುವುದು ಎಂದು ತಿಳಿಸಿದರು.

ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಎಲ್ಲಾ ನಾಯಕರು ಕೂತು ಚರ್ಚೆ ಮಾಡುತ್ತೇವೆ. ನೇಮಕದ ಪಟ್ಟಿ ಒಂದು ಹಂತಕ್ಕೆ ಬಂದಿದೆ. ಕೇಂದ್ರ ನಾಯಕರು ಕೂಡ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿರುತ್ತಾರೆ. ಅದಕ್ಕಾಗಿ ಎಲ್ಲರ ಜತೆ ಚರ್ಚೆ ಮಾಡಬೇಕು ಎಂದು ತಿಳಿಸಿದರು.ಸಂಕ್ರಾಂತಿ ಹಬ್ಬದ ವೇಳೆಗೆ ನೇಮಕ ಆಗಬಹುದು ಎನ್ನುವ ನಿರೀಕ್ಷೆ ಇದೆ ಎಂದು ಹೇಳಿದರು.
ಜನಸಾಮಾನ್ಯರು ತಮ್ಮ ಕಷ್ಟಗಳನ್ನು ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರ ಕಷ್ಟಗಳನ್ನು ಕೇಳಲು ನಾವೇ ಅವರ ಬಳಿ ಹೋಗಬೇಕು, ಅವರ ಒತ್ತಡ ಕಡಿಮೆ ಮಾಡುವ ಉದೇಶದಿಂದ "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಮುಂದಿನ ತಿಂಗಳು ದಿನಕ್ಕೆ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಮಧ್ಯೆ ದೆಹಲಿ ಹಾಗೂ ಬೇರೆ ಕಡೆ ಪ್ರವಾಸ ಮಾಡುವ ವೇಳೆ ಈ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗಿದೆ. ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಸಂಸದರು ಭಾಗವಹಿಸಲು ಆಹ್ವಾನ ನೀಡುತ್ತೇವೆ.
ಜನವರಿ 10 ರ ಪಕ್ಷದ ಸಭೆ ವಿಚಾರವಾಗಿ ಮಾತನಾಡಿ, ಲೋಕಸಭೆ ಚುನಾವಣೆ ಸಿದ್ಧತೆ ವಿಚಾರವಾಗಿ ಜನವರಿ 10 ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜತೆ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
ಜಜವರಿ 4 ರಂದು ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, "ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಭೆ ಇದೆ. ಚುನಾವಣೆ ಅಭ್ಯರ್ಥಿ ವಿಚಾರವಾಗಿ ಕೆಲವು ಸಚಿವರು ವರದಿ ನೀಡಿದ್ದಾರೆ. ಅವರ ಬಗ್ಗೆ ಸಮೀಕ್ಷೆ ನಡೆಸಬೇಕಿದೆ. ಈ ವಿಚಾರವಾಗಿ ಚರ್ಚೆ ಮಾಡಲು ದೆಹಲಿಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನಗೆ ಉತ್ತರಿಸಿ, ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚುಕಮ್ಮಿ ಆಗಿರುತ್ತದೆ. ಅದೇನು ವಿಚಾರ ಎಂದು ನೋಡುತ್ತೇನೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರಿಗೆ ನೆರವು, ಸಿಎಂ ನಿರ್ಧಾರದಲ್ಲಿ ತಪ್ಪೇನಿದೆ?
ಅಲ್ಪಸಂಖ್ಯಾತರಿಗೆ ಸಾವಿರ ಕೋಟಿ ರೂ. ಕ್ರಿಯಾಯೋಜನೆ ಬಗ್ಗೆ ಮಾತನಾಡಿ, ನಿಮ್ಮನ್ನು ರಾಮನಗರಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಪ್ರವಾಹ ಪರಿಸ್ಥಿತಿ ಬಂದ ಪ್ರದೇಶದ ಸ್ಥಿತಿಗತಿ ಹೇಗಿದೆ ಎಂದು ಬಂದು ನೋಡಿ. ಅವರು ಹೇಗೆ ಬದುಕುತ್ತಿದ್ದಾರೆ ಎಂಬುದೇ ಆಶ್ಚರ್ಯ. ಜನರ ಬದುಕು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ. 224 ಕ್ಷೇತ್ರಗಳಿಗೆ ಈ ಅನುದಾನ ಹಂಚಿದರೆ ಎಷ್ಟು ಸಿಗುತ್ತದೆ. ಹಳ್ಳಿಗಳಲ್ಲಿ ನರೇಗಾ ಯೋಜನೆ ಅವಕಾಶವಿದೆ. ಆದರೆ ಈ ಸಮುದಾಯ ಹೆಚ್ಚಾಗಿ ನಗರ ಪ್ರದೇಶದಲ್ಲಿ ವಾಸವಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚು ಅವಕಾಶ ಇಲ್ಲ. ಅವರ ಪ್ರದೇಶ ಸ್ವಚ್ಛ ಮಾಡಿ, ಬದುಕು ಬದಲಿಸಬೇಕು ಎಂದು ಸಿಎಂ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ತಿಳಿಸಿದರು.












Click it and Unblock the Notifications