ಸೆ.28ರಂದು ಮೆಡಿಕಲ್ ಶಾಪ್ ಬಂದ್
ಬೆಂಗಳೂರು, ಸೆಪ್ಟೆಂಬರ್ 19 : ಔಷಧಿ ಅಂಗಡಿಗಳ ಮಾಲೀಕರು ಸೆ.28ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರದ ದಿನ ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಮುಚ್ಚಿರುತ್ತದೆ.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ (ಎಐಒಸಿಡಿ) ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ದೇಶಾದ್ಯಂತ ಮುಷ್ಕರ ನಡೆಯಲಿದ್ದು, ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಬಂದ್ ಆಗಲಿದೆ.
ಆನ್‌ಲೈನ್ ಮೂಲಕ ಔಷಧಿಗಳ ಖರೀದಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆನ್‌ಲೈನ್ ಮೂಲಕ ಔಷಧ ಖರೀದಿ ನಡೆಯುತ್ತಿದೆ, ಇದರಿಂದ 1.5 ಕೋಟಿ ಅವಲಂಬಿತ ಕುಟುಂಬಗಳು ಆತಂಕಕ್ಕೆ ಸಿಲುಕಿವೆ ಎಂದು ಎಐಒಸಿಡಿ ಹೇಳಿದೆ.

ಆನ್‌ಲೈನ್ ಮೂಲಕ ಔಷಧಿಗಳ ಖರೀದಿ ನಡೆದರೆ ಗುಣಮಟ್ಟ ಮತ್ತು ಬಳಕೆಯ ವಿಧಾನದ ಬಗ್ಗೆ ಜನರಿಗೆ ಮಾಹಿತಿ ಸಿಗುವುದಿಲ್ಲ. ಇದರಿಂದಾಗಿ ರೋಗಿಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗಬಹುದು ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.
ಸೆ.28ರಂದು ಆಸ್ಪತ್ರೆ, ನರ್ಸಿಂಗ್ ಹೋಂ ಹೊರತು ಪಡಿಸಿ ಉಳಿದ ಕಡೆ ಇರುವ ಎಲ್ಲಾ ಔಷಧಿ ಅಂಗಡಿಗಳು ಬಂದ್ ಆಗಲಿವೆ. ರೋಗಿಗಳಿಗೆ ಈಗಲೇ ಮಾಹಿತಿ ತಿಳಿದಿರಲಿ ಎಂದು ಮುಷ್ಕರದ ದಿನಾಂಕವನ್ನು ಇಂದೇ ಘೋಷಣೆ ಮಾಡಲಾಗಿದೆ.












Click it and Unblock the Notifications