"ಕಲಬುರಗಿ ಜಿಲ್ಲಾಧಿಕಾರಿ ಪಾಕಿಸ್ತಾನಿ" : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು
ಕಲಬುರಗಿ, ಮೇ 27: ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ "ಕಲಬುರಗಿ ಚಲೋ" ಪ್ರತಿಭಟನೆಯ ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು ಮಾತಿನ ಭರದಲ್ಲಿ ಕಲಬುರ್ಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರನ್ನು ಪಾಕಿಸ್ತಾನಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಐಎಎಸ್ ಅಧಿಕಾರಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ "ಪಾಕಿಸ್ತಾನದಿಂದ ಬಂದಿರಬಹುದು" ಎಂದು ಹೇಳಿಕೆ ನೀಡಿದ್ದಕ್ಕಾಗಿ ಕರ್ನಾಟಕ ಪೊಲೀಸರು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
2015 ರ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಫೌಜಿಯಾ ತರನ್ನಮ್ ಅವರನ್ನು , ಈ ವರ್ಷದ ಜನವರಿಯಲ್ಲಿ ಭಾರತದ ರಾಷ್ಟ್ರಪತಿಗಳು ನೀಡಿದ ಅತ್ಯುತ್ತಮ ಚುನಾವಣಾ ಪದ್ಧತಿ ಪ್ರಶಸ್ತಿಯನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕದ ಐಎಎಸ್ ಅಧಿಕಾರಿಗಳ ಸಂಘವು ರವಿಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ್ದು, ಬಿಜೆಪಿ ಶಾಸಕರು ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಮೇ 24 ರಂದು ಬಿಜೆಪಿಯ ಕಲಬುರಗಿ ಚಲೋ ಪ್ರತಿಭಟನೆ ವೇಳೆ ಆಯೋಜಿಸಲಾದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರವಿಕುಮಾರ್, ಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿದ್ದಾರೆಯೆ ಎಂದು ಹೇಳುವ ಮೂಲಕ ಅವಹೇಳನಕಾರಿ ಉಲ್ಲೇಖವನ್ನು ಮಾಡಿದ್ದಾರೆ.
ಇನ್ನೂ ಭಾಷಣ ಮುಂದುವರೆಸಿದ್ದು, ಕಲಬುರಗಿ ಡಿಸಿ ಕಚೇರಿಯೂ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ. ಡಿಸಿ ಮೇಡಂ ಅವರು (ಕಾಂಗ್ರೆಸ್) ಹೇಳುವುದನ್ನು ಸಹ ಕೇಳುತ್ತಿದ್ದಾರೆ. ಅವರೇನು ಪಾಕಿಸ್ತಾನದಿಂದ ಬಂದಿದ್ದಾರೆಯೇ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೇ ಎಂದು ನನಗೆ ತಿಳಿದಿಲ್ಲ" ಎಂದು ರವಿಕುಮಾರ್ ಹೇಳಿದ್ದು, ಈ ವೇಳೆ ಜನರ ಚಪ್ಪಾಳೆಗೆ ಪ್ರತಿಕ್ರಿಯಿಸಿ, ನಿಮ್ಮ ಚಪ್ಪಾಳೆಯನ್ನು ನೋಡಿದರೆ, "ಡಿಸಿ ಬಹುಷಃ ಪಾಕಿಸ್ತಾನದಿಂದ ಬಂದಿದ್ದಾರೆ" ಎಂದು ಮತ್ತೆ ಮಹಿಳಾ ಅಧಿಕಾರಿಯನ್ನು ಅವಹೇಳನ ಮಾಡಿದ್ದಾರೆ. ಅವರ ಹೇಳಿಕೆಗೆ ರಾಜ್ಯದ ಪ್ರಗತಿಪರ ಸಂಘಟನೆಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಹೇಳಿಕೆಯು "ಅವಮಾನಕರ ಮತ್ತು ಕೋಮುವಾದಿ" ಹೇಳಿಕೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ರವಿಕುಮಾರ್ ಅವರ ಹೇಳಿಕೆಗೆ ಬಿಜೆಪಿಯನ್ನು ಟೀಕಿಸಿದ್ದಾರೆ. ಮತ್ತು ಈ ತಿಂಗಳ ಆರಂಭದಲ್ಲಿ ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ಪ್ರಿಯಾಂಕ್ ಖರ್ಗೆ ಅವರು ಉಲ್ಲೇಖಿಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹೇಳಿಕೆಗಳು ಅಧಿಕಾರಿಗಳ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications