ಮೇ 7ರಂದು ಮತದಾನ: ವೇತನ ಸಹಿತ ರಜೆ ಘೋಷಣೆ
ಬೆಂಗಳೂರು, ಏಪ್ರಿಲ್ 29: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏಪ್ರಿಲ್ 26ರಂದು ಮತದಾನ ನಡೆದಿದೆ. ಶೇ 69.56 ರಷ್ಟು ಮತದಾನವಾಗಿದೆ. ಉಳಿದ 14 ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ.
ದೇಶದ 3ನೇ ಹಂತ ಮತ್ತು ಕರ್ನಾಟಕದ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತದಾನ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಮೇ 7ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ಕಛೇರಿ, ಶಾಲಾ-ಕಾಲೇಜು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಎಲ್ಲಾ ವ್ಯವಹಾರ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಕೆಲಸ ನಿರ್ವಹಣೆ ಮಾಡುತ್ತಿರುವ ನೌಕರರು ಸಂವಿಧಾನತ್ಮಕ ಮತ್ತು ಶಾಸನಾತ್ಮಕ ಹಕ್ಕಾದ ಮತದಾನವನ್ನು ಮಾಡಲು ಅನುಕೂಲವಾಗುವಂತೆ ರಜೆ ನೀಡಲಾಗಿದೆ.
ವೇತನ ಸಹಿತ ರಜೆ: ಎಲ್ಲಾ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಎಲ್ಲಾ ವ್ಯವಹಾರ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಂವಿಧಾನಾತ್ಮಕ ಅಥವಾ ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಅನುಕೂಲವಾಗುವಂತೆ ಮತದಾನದ ದಿನವಾದ ಮೇ 7ರಂದು ನೌಕರರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಆದೇಶಿಸಲಾಗಿದೆ.
ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಗುಣವಾಗುವಂತೆ ಸಂಬಂಧಿಸಿದ ಇಲಾಖೆ ಹಾಗೂ ಸಂಘ ಸಂಸ್ಥೆಗಳು ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಮೇ 7ರಂದು ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.
ಮತದಾನಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ, ಅಗತ್ಯ ಸೇವೆಗಳ ವರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಂಚೆ ಮತ ಪತ್ರಗಳನ್ವಯ ಮತ ಚಲಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಅಂಚೆ ಮತ ಪತ್ರಗಳ ಮೂಲಕ ಮತ ಚಲಾಯಿಸಲು ಮೇ 1 ರಿಂದ 3ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 'ಅಂಚೆ ಮತದಾನ ಕೇಂದ್ರ'ವನ್ನು ತೆರೆಯಲಾಗಿದ್ದು, ಅಗತ್ಯ ಸೇವೆಗಳ ವರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ ಚಲಾಯಿಸಬಹುದು.
ಮೇ 7ರಂದು ನಡೆಯುವ ಮತನದಾನದ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಮತ್ತು ಮತದಾನವನ್ನು ಸುಗಮವಾಗಿ ಮತ್ತು ಮುಕ್ತವಾಗಿ ಜರುಗಿಸುವ ಹಿತದೃಷ್ಠಿಯಿಂದ ಮೇ 5ರ ಸಂಜೆ 6 ಗಂಟೆಯಿಂದ ಮೇ 8ರ ಸಂಜೆ 6 ಗಂಟೆಯವರೆಗೆ ಸಿ.ಆರ್.ಪಿ.ಸಿ 1973 ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 ರಡಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗುತ್ತದೆ.
ಮತದಾನ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಮತ್ತು ಮತದಾನದ ಪ್ರಾವಿತ್ರ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ 1973 ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35ರ ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಹಾಗೂ ಎಲ್ಲ ಸಹಾಯಕ ಚುನಾವಣಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುತ್ತದೆ ಮತ್ತು ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ, ಚುನಾವಣಾ ಕಾರ್ಯನಿರತ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವದಿಲ್ಲ.












Click it and Unblock the Notifications