ಸಿಹಿ ಸುದ್ದಿ: ಮಂಗಳೂರು-ಬೆಂಗಳೂರಿಗೆ ಸೆ.7ರಿಂದ ಹೆಚ್ಚುವರಿ ವಿಮಾನಗಳ ಹಾರಾಟ ವಿವರ
ಬೆಂಗಳೂರು, ಸೆಪ್ಟಂಬರ್ 05: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (MIA) ಬೆಂಗಳೂರು ಮತ್ತು ಮಂಗಳೂರು ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ವೀಕೆಂಡ್ ಹೊರತುಪಡಿಸಿ ವಾರದ ದಿನಗಳಲ್ಲಿ ಹೆಚ್ಚುವರಿ ದೈನಂದಿನ ವಿಮಾನಗಳು ಮಂಗಳೂರು ಏರ್‌ಪೋರ್ಟ್‌ನಿಂದ ಓಡಾಡಲಿವೆ. ಅಲ್ಲದೇ ವಾರಾಂತ್ಯದಲ್ಲಿ ದೈನಂದಿನ ವಿಮಾನಗಳ ಹೆಚ್ಚುವರಿ ಸಂಚಾರ ಸೇವೆಯನ್ನು ನೀಡಲಿದೆ.
ಹೌದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (MIA) ಇದೇ ಸೆಪ್ಟಂಬರ್ 7 ರಿಂದ ಶನಿವಾರದಿಂದ ಹೆಚ್ಚುವರಿ ಸೇವೆ ನೀಡಲಿದೆ. ಇಂಡಿಗೋ ಏರ್‌ಲೈನ್ಸ್ ಈ ಹೆಚ್ಚುವರಿ ಸೇವೆಯನ್ನು ಅಕ್ಟೋಬರ್ 28 ರವರೆಗೆ ನಿರ್ವಹಿಸಲಿದೆ ಎಂದು ಮಂಗಳೂರು ಏರ್‌ಪೊರ್ಟ್ ಮೂಲಗಳು ತಿಳಿಸಿವೆ.

ಪ್ರಸ್ತುತದಲ್ಲಿ ಇಂಡಿಗೋ ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ನಾಲ್ಕು ವಿಮಾನಗಳನ್ನು ನಿರ್ವಹಿಸುತ್ತಿದೆ . ಇದೀಗ ಅದರ ಕಾರ್ಯಾಚರಣೆಯನ್ನು ಹೆಚ್ಚಿಸಲು ಸಿದ್ಧವಾಗಿದೆ.
ಸೆಪ್ಟೆಂಬರ್ 7 ರಿಂದ ವಿಮಾನ ಸಂಖ್ಯೆ 6E 6858 ಈ ಮಾರ್ಗದಲ್ಲಿ ಮರು-ಪರಿಚಯವಾಗುತ್ತಿದೆ. ಕರಾವಳಿಯಿಂದ- ಸಿಲಿಕಾನ್ ಸಿಟಿ ಮಾರ್ಗದಲ್ಲಿ ಇಂಡಿಗೋ ಸಂಸ್ಥೆಯು ಹೆಚ್ಚುವರಿಯಾಗಿ ಐದನೇ ವಿಮಾನವನ್ನು ಸೇವೆ ನಿಯೋಜಿಸಲಿದೆ. ಈ ವಿಮಾನವು ಮಂಗಳೂರಿಗೆ ಬೆಳಗ್ಗೆ 8.35 ಕ್ಕೆ ಆಗಮಿಸುತ್ತದೆ. ತದನಂತರ ಈ 6E 5347 ಸಂಖ್ಯೆ ವಿಮಾನವು ಮಂಗಳೂರಿನಿಂದ 9.10ಕ್ಕೆ ಬೆಂಗಳೂರಿಗೆ ಹೊರಡುತ್ತದೆ ಎಂದು ಎಂಐಎ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ವಾರದ ಯಾವ ದಿನ ಕಾರ್ಯಾಚರಣೆ?
ಇದಲ್ಲದೇ ಮಂಗಳೂರಿನಿಂದ ವಿಮಾನಗಳು ಬೆಂಗಳೂರಿನ ಮೂಲಕ ಬೆಳಗ್ಗೆ 6.50ಕ್ಕೆ ಕೋಲ್ಕತ್ತಾ, ತೆರಳುತ್ತವೆ. ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಮತ್ತೆ ಮಂಗಳೂರಿಗೆ ತೆರಳುತ್ತವೆ. ಇವುಗಳ ನಿತ್ಯ ಕ್ರಮವಾಗಿ ಹೊರಡುತ್ತವೆ.
ಇಂಡಿಗೋ ಸಂಸ್ಥೆ ವಾರದಲ್ಲಿ ಮಂಗಳವಾರ, ಗುರುವಾರ, ಭಾನುವಾರ ಹಾಗೂ ಶನಿವಾರದಂದು ತನ್ನ ಮಂಗಳೂರು-ಪುಣೆ ವಿಮಾನದ ಕಾರ್ಯಾಚರಣೆಯನ್ನು ಮರುಪರಿಚಯಿಸಿದೆ. ಇದರಿಂದ ಈ ಮಾರ್ಗದಲ್ಲಿ ಇಂಡಿಗೋದ ಆರನೇ ವಿಮಾನ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ.
ಇನ್ನೂ 6E 294 ಸಂಖ್ಯೆಯ ವಿಮಾನವು ಮಂಗಳೂರಿಗೆ ಸಂಜೆ 5.50ಕ್ಕೆ ಆಗಮಿಸದರೆ, ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಜೆ 6.35ಕ್ಕೆ 6E 298 ಸಂಖ್ಯೆಯ ವಿಮಾನದಲ್ಲಿ ಪುಣೆಗೆ ಹೊರಡುತ್ತದೆ. ಶನಿವಾರ (6E359) ಬೆಂಗಳೂರಿನಿಂದ ಸಂಜೆ 5.50 ಕ್ಕೆ ಹೊರಡುವ ವಿಮಾನ ಮಂಗಳೂರಿಗೆ ಆಗಮಿಸುತ್ತದೆ. ನಂತರ (6E 298) ವಿಮಾನವು 6.35 ಕ್ಕೆ ಪುಣೆಗೆ ಪ್ರಯಾಣ ಆರಂಭಿಸುತ್ತದೆ.
ಎರಡು ಮಾರ್ಗಗಳ ವಿಮಾನ ಸಂಚಾರ ಹೆಚ್ಚಳ
ಮಂಗಳೂರು-ಬೆಂಗಳೂರು ಹಾಗೂ ಮಂಗಳೂರು-ಪುಣೆ ಸೆಕ್ಟರ್‌ನಲ್ಲಿನ ವಿಮಾನಗಳ ವೇಳಾಪಟ್ಟಿಯಲ್ಲಿನ ತುಸು ಬದಲಾವಣೆ ಆಗಿವೆ. ಸೋಮವಾರದಿಂದ ಶುಕ್ರವಾರದವರೆಗೆ ದೈನಂದಿನ ಅಂತಾರರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಚಲನೆಯಲ್ಲಿ 38 ರಿಂದ 40 ಕ್ಕೆ ಮತ್ತು ಶನಿವಾರ ಮತ್ತು ಭಾನುವಾರದಂದು 40 ರಿಂದ 42ಕ್ಕೆ ಹೆಚ್ಚಿಸಲಾಗಿದೆ ಎಂದು ಎಂಐಎ ಹೇಳಿದೆ.
ಅದಷ್ಟೇ ಅಲ್ಲದೇ ಮಂಗಳೂರು ವಿಮಾನ ನಿಲ್ದಾಣವು ಹೆಚ್ಚುವರಿ ವಿಮಾನ ನಿಲ್ದಾಣಗಳನ್ನು ತನ್ನ ವೇಳಾಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಇನ್ನಿತರ ವಿಮಾನಯಾನ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿದ್ದು, ಆ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎನ್ನಲಾಗಿದೆ. ಮುಂದಿನ ತಿಂಗಳು ಅಕ್ಟೋಬರ್ 29 ರಿಂದ ಆರಂಭವಾಗುವ ಚಳಿಗಾಲ ವೇಳಾಪಟ್ಟಿಯಲ್ಲಿ ಹೊಸ ವಿಮಾನಗಳು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇವೆ.












Click it and Unblock the Notifications