Mangaluru Cooker Bomb Blast: ಕಾಂಗ್ರೆಸ್‌ನಲ್ಲೇ ಏಕಾಂಗಿಯಾದರಾ ಡಿಕೆಶಿ?
ಬೆಂಗಳೂರು, ಡಿಸೆಂಬರ್ 16: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ(Cooker Bomb Blast Case) ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ.
'ಮತದಾರರ ಮಾಹಿತಿ ಕಳುವು (Voter Data Theft) ಪ್ರಕರಣವನ್ನು ಮುಚ್ಚಿಹಾಕಲು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಹುಟ್ಟುಹಾಕಿದೆ' ಎಂದು ಶಿವಕುಮಾರ್ ತಿಳಿಸಿದ್ದರು.

ಮುಂಬೈ ರೀತಿ ದಾಳಿ ನಡೆದಿಲ್ಲ ಎಂದ ಡಿಕೆಶಿ
'ಮಂಗಳೂರು ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶಾರಿಕ್‌ನನ್ನು ಭಯೋತ್ಪಾದಕನೆಂದು ಪೊಲೀಸ್ ಕಮಿಷನರ್ ಕರೆದಿದ್ದಾರೆ. ಪ್ರಕರಣದ ತನಿಖೆ ನಡೆಯದೇ ಕಮಿಷನರ್ ಹೇಳಿಕೆ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ' ಎಂದು ಡಿಕೆಶಿ ಹೇಳಿದ್ದರು.
ಪುಲ್ವಾಮಾ, ಮುಂಬೈ ಅಥವಾ ದೆಹಲಿ ಹಾಗೆ ಮಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆದಿಲ್ಲ. ರಾಜ್ಯ ಸರ್ಕಾರವೇ ಜನರ ದಾರಿ ತಪ್ಪಿಸಲು, ಭ್ರಷ್ಟಾಚಾರ ಹಾಗೂ ಮತದಾರರ ದತ್ತಾಂಶ ಕಳುವು ಪ್ರಕರಣವನ್ನು ಮುಚ್ಚಿಹಾಕಲು ಈ ಘಟನೆಯನ್ನು ಮುನ್ನೆಲೆಗೆ ತಂದಿದೆ ಎಂದು ಶಿವಕುಮಾರ್ ಹೇಳಿಕೆ ನೀಡಿದ್ದರು.

ಡಿಕೆಶಿ ಹೇಳಿಕೆಗೆ ಬಿಜೆಪಿ ನಾಯಕರ ತೀವ್ರ ಆಕ್ರೋಶ
ಮಂಗಳೂರು ಬ್ಲಾಸ್ಟ್ ಕುರಿತ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಡಿಕೆಶಿ ಯಾರ ಪರ ಎಂಬುದನ್ನು ಸ್ಪಷ್ಟಪಡಿಸಲಿ. ಅವರು ಭಯೋತ್ಪಾದಕರ ಪರವೋ, ದೇಶಭಕ್ತರ ಪರವೋ ಎಂಬುದನ್ನು ಬಹಿರಂಗಪಡಿಸಲಿ' ಎಂದು ಸವಾಲು ಹಾಕಿದ್ದಾರೆ.
'ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಮೂಲಕ ಡಿ.ಕೆ.ಶಿವಕುಮಾರ್, ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ' ಎಂದು ಇಂಧನ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇದೇ ರೀತಿಯ ಆಕ್ರೋಶವನ್ನು ಆರ್.ಅಶೋಕ್, ಸಿ.ಟಿ.ರವಿ, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಹಲವು ನಾಯಕರು ವ್ಯಕ್ತಪಡಿಸಿದ್ದಾರೆ.

ಡಿಕೆಶಿಗೆ ಬೆಂಬಲಿಸದ ಸ್ವಪಕ್ಷೀಯ ನಾಯಕರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಕೆಶಿ ಹೇಳಿಕೆಯನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಎಲ್ಲ ಯತ್ನಗಳೂ ಬಿಜೆಪಿಯಿಂದ ನಡೆಯುತ್ತಿವೆ. ಆದರೆ, ತಮ್ಮ ನಾಯಕನ ಪರವಾಗಿ ನಿಲ್ಲಲು ಕಾಂಗ್ರೆಸ್‌ನ ಯಾವುದೇ ನಾಯಕರು ಮುಂದೆ ಬಂದಿಲ್ಲ. ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಯು.ಡಿ.ಖಾದರ್ ಸೇರಿದಂತೆ ಯಾವುದೇ ಪ್ರಮುಖ ನಾಯಕರು ಡಿಕೆಶಿ ಪರ ಹೇಳಿಕೆ ನೀಡಿಲ್ಲ.
ಡಿಕೆಶಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬೆಳಗಾವಿ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಹ ಈ ವಿಚಾರವಾಗಿ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ 'ನೋ ಕಾಮೆಂಟ್ಸ್' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟು ಮಾಡಿದೆ ಎಂಬುದಂತೂ ಮೇಲ್ನೋಟಕ್ಕೆ ಕಂಡುಬರುತ್ತದೆ.

ತಮ್ಮದೇ ಪಕ್ಷದಲ್ಲಿ ಏಕಾಂಗಿಯಾದರೇ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯೂ ಆಗುವ ಮಹದಾಸೆಯನ್ನೂ ಹೊಂದಿದವರು. ಸಿದ್ದರಾಮಯ್ಯ ಬಣದ ನಾಯಕರು ಈಗಾಗಲೇ ಡಿಕೆಶಿಯಿಂದ ಒಂದು ಮಟ್ಟಿಗಿನ ಅಂತರವನ್ನು ಕಾಯ್ದುಕೊಂಡಿರುವುದು ಕಂಡುಬಂದಿದೆ. ಈಗ ಡಿಕೆಶಿ ನೀಡಿದ ಹೇಳಿಕೆಯಿಂದ ಅವರದ್ದೇ ಆಪ್ತರು ಅಂತರ ಕಾಯ್ದುಕೊಂಡಿದ್ದಾರೆ.
ಮಂಗಳೂರು ಬ್ಲಾಸ್ಟ್ ಕುರಿತ ಡಿಕೆಶಿ ಹೇಳಿಕೆಯು ಅವರಿಗೇ ತಿರುಮಂತ್ರವಾಯಿತೇ ಎಂಬ ಸಂಶಯಗಳೂ ಮೂಡುತ್ತಿವೆ. ಇದಕ್ಕೆ ಪೂರಕವೆಂಬಂತೆ, ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ, 'ನನಗೆ ಯಾರ ಬೆಂಬಲವೂ ಬೇಕಿಲ್ಲ' ಎಂಬ ಹೇಳಿಕೆಯನ್ನು ಡಿಕೆಶಿ ನೀಡಿದ್ದಾರೆ. ಈ ಹೇಳಿಕೆಯ ಒಳಾರ್ಥಗಳನ್ನು ಗಮನಿಸುವುದಾದರೆ, ಕಾಂಗ್ರೆಸ್‌ನಲ್ಲೇ ಡಿಕೆಶಿ ಏಕಾಂಗಿಯಾದರೇ ಎಂಬ ಪ್ರಶ್ನೆ ಮೂಡುವುದಂತೂ ಸಹಜ.












Click it and Unblock the Notifications