ಕರ್ನಾಟಕ ರಾಜ್ಯ ಸರ್ಕಾರಿ ನೌಕರರೇ ಬಡ್ತಿ ಬೇಕೆಂದರೆ ಇದನ್ನು ಓದಿ..
ಬೆಂಗಳೂರು, ಆಗಸ್ಟ್ 18: ಕರ್ನಾಟಕ ಸರ್ಕಾರಿ ನೌಕರರು ಕಂಪ್ಯೂಟರ್ ಕಲಿಯಬೇಕಾಗಿರುವುದು ಕಡ್ಡಾಯವಾಗಿದೆ. ಈ ಸಂಬಂಧ ಕರ್ನಾಟಕ ಸರ್ಕಾರಿ ನೌಕರರ ಸಂಘವು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ಪ್ರಕಟಣೆ ಹೊರಡಿಸಲಿದೆ.
ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 1(3)ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರೆ ಎಲ್ಲಾ ಅಭ್ಯರ್ಥಿಗಳು ದಿನಾಂಕ 31.12.2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿರುತ್ತದೆ. ಸದರಿ ದಿನಾಂಕದ ನಂತರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಸರ್ಕಾರವು ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸುವುದಿಲ್ಲವೆಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಪಡೆದಿರುವ ಅಧಿಕಾರಿ ಹಾಗೂ ನೌಕರರು ಪ್ರತಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡು 31.12.2022ರೊಳಗೆ ಉತ್ತೀರ್ಣರಾಗುವಂತೆ ತಿಳಿಸಿದೆ.

ಈಗ ನೇಮಕಾತಿ ಮಾಡಿಕೊಳ್ಳುತ್ತಿರುವ ಬಹುತೇಕ ಆಡಳಿತಾತ್ಮಕ ಹುದ್ದೆಗಳಿಗೆ ಕಂಪ್ಯೂಟರ್ ಸಾಕ್ಷರತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದಲೇ ಸರ್ಕಾರ ನೇಮಕಾತಿ ವೇಳೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವಾಗಲೇ ಕಂಪ್ಯೂಟರ್ ಸಾಕ್ಷರತಾ ಪ್ರಮಾಣಪತ್ರವನ್ನು ಕೋರುತ್ತದೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ಹಲವು ಇಲಾಖೆಗಳ ಪರೀಕ್ಷಗಳನ್ನು ತೆಗೆದುಕೊಳ್ಳುವಾಗ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರವನ್ನು ಕೇಳುತ್ತದೆ. ಇನ್ನೂ ಎಸ್‌ಎಸ್‌ಸಿ ಸೇರಿದಂತೆ ಕೆಲವು ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸುತ್ತದೆ.

ಸರ್ಕಾರ ತನ್ನ ಆಡಳಿತದಲ್ಲಿ ಹೆಚ್ಚೆಚ್ಚು ಡಿಜಿಟಲೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಎಲ್ಲೆಡೆ ಸರ್ಕಾರ ಮಾಹಿತಿ ಲಭ್ಯವಾಗುವಂತೆ ಮಾಡಲು ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆ ಅನಿವಾರ್ಯವಾಗಿದೆ. ಹಾಗಾಗಿ ಈ ವರ್ಷದೊಳಗೆ ಎಲ್ಲ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತೆ ಹೊಂದುವುದು ಕಡ್ಡಾಯ ಎಂದು ಹೇಳಿದೆ.












Click it and Unblock the Notifications